ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿ ಓರ್ವ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ದುರ್ಗಟನೆ ರಾಷ್ಟ್ರೀಯ ಹೆದ್ದಾರಿ ಬನ್ನಡ್ಕದಲ್ಲಿ ಸಂಭವಿಸಿದೆ.
ಪಡುಮಾರ್ನಾಡು ಪಂಚಾಯತ್ ಬಳಿಯ ಅಚ್ಚರಕಟ್ಟೆ ನಿವಾಸಿ ರವಿ ಅವರ ಪುತ್ರ, ಮೂಡುಬಿದಿರೆ ಜೈನ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ಆದಿತ್ಯ ಮೃತಪಟ್ಟ ದುರ್ದೈವಿ.
ವಿದ್ಯಾರ್ಥಿ ಆದಿತ್ಯ ಇಂದು ಪರೀಕ್ಷೆ ಮುಗಿಸಿ ತನ್ನ ಗೆಳೆಯರೊಡನೆ ಮನೆಗೆ ಹೋಗಲು ಬನ್ನಡ್ಕದಲ್ಲಿ ಬಸ್ಸಿನಿಂದಿಳಿದು ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಆದಿತ್ಯ ಹೆದ್ದಾರಿಯಿಂದ ಚರಂಡಿಗೆ ಎಸೆಯಲ್ಪಟ್ಟಿದ್ದು ಈ ಸಂದರ್ಭ ಕಾರಿನವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.ಆದರೆ ಅಧಿಕ ರಕ್ತಸ್ರಾವವಾಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆದ್ದಾರಿ ಕಾಮಗಾರಿ ನಿರ್ಮಾಣದಲ್ಲಿ ಈ ಭಾಗದ ಪ್ರಭಾವಿಗಳೊಂದಿಗೆ ಹೊಂದಾಣಿಕೆಯಾದ ಕಾರಣ ರಸ್ತೆಯ ವ್ಯತ್ಯಾಸ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಸ್ತೆ ಅಂಕು ಡೊಂಕು, ಏರು ತಗ್ಗು ಸೇರಿದಂತೆ ಅವ್ಯವಸ್ಥೆಯಿಂದ ಕೂಡಿದ್ದು ಇದರಿಂದಾಗು ಎದುರಿನಲ್ಲಿ ಬರುತ್ತಿರುವ ವಾಹನಗಳು ಗಮನಕ್ಕೆ ಬಾರದೆ ಇರುವುದರಿಂದ ಇಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈ ಅವೈಜ್ಞಾನಿಕ ರಸ್ತೆ ಕಾಮಗಾರಿ ಇಂದು ವಿದ್ಯಾರ್ಥಿಯೋರ್ವನನ್ನು ಬಲಿ ತೆಗೆದುಕೊಂಡಿದೆ.
Leave a Reply