Subscriber Content

Add content here that will only be visible to your subscribers.

ರಾಜ್ಯಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್: ಆಳ್ವಾಸ್ ಮತ್ತು ಎಸ್‌ಡಿಎಂ ತಂಡಗಳಿಗೆ ವಿಜಯಶ್ರೇಯಸ್ಸು

ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಅತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯಮಟ್ಟ) ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಮಹಿಳಾ ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಚಾಂಪಿಯನ್ ಪಟ್ಟವನ್ನು ಗಳಿಸಿವೆ.

ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಅಂಕಣದಲ್ಲಿ ನಡೆದ ಪುರುಷರ ಫೈನಲ್‌ನಲ್ಲಿ ಮಂಗಳೂರಿನ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ತಂಡವನ್ನು ಮಣಿಸಿದ ಆಳ್ವಾಸ್ ಕಾಲೇಜ್ ಪ್ರಶಸ್ತಿ ಗೆದ್ದಿತು.

ಮಹಿಳಾ ವಿಭಾಗದಲ್ಲಿ ಬಾಗಲಕೋಟೆಯ ಸಜ್ಜಲಶ್ರೀ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ತಂಡವನ್ನು ಮಣಿಸಿದ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆತಿಥೇಯ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ತೃತೀಯ ಸ್ಥಾನ ಪಡೆದಿತು.

ಪುರುಷರ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ವೀರೇಶ್, ಅತ್ಯುತ್ತಮ ಡಿಫೆಂಡರ್ ಆಗಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಹೇಮಂತ್ ಜಿ.ವೈ, ಅತ್ಯುತ್ತಮ ಆಲ್ ರೌಂಡರ್ ಆಗಿ ಆಳ್ವಾಸ್ ಮಹಮ್ಮದ್ ಸತಾರ್ ಪುರಸ್ಕೃತರಾದರು.

ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ಎಸ್‌ಡಿಎಂ ಮಾನಸ, ಅತ್ಯುತ್ತಮ ಡಿಫೆಂಡರ್ ಆಗಿ ಎಸ್‌ಡಿಎಂ ಪ್ರಗತಿ, ಅತ್ಯುತ್ತಮ ಆಲ್ ರೌಂಡರ್ ಆಗಿ ಸಜನಶ್ರೀ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ನಂದಿತಾ ವೈಯಕ್ತಿಕ ಪ್ರಶಸ್ತಿ ಪಡೆದರು.

ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಅನಿಲ ಏಜೆನ್ಸಿ ವ್ಯವಸ್ಥಾಪಕ ಪಾಲುದಾರ ಅಭಿಜಿತ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೀಕ್ಷಕರಾದ ಧರ್ಮೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ವಿತರಿಸಿದರು.

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ವನಿತಾ ಶೆಟ್ಟಿ, ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೊ, ಆಳ್ವಾಸ್ ನ ದೈ.ಶಿ.ನಿ. ಅವಿನಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ADVRTISEMENT