“ಮೂಡುಬಿದಿರೆ ಮಾರ್ಕೆಟ್ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ಅನುಮತಿ?”

ಕಳೆದ ನಾಲ್ಕೈದು ವರ್ಷಗಳಿಂದ ಮೂಡುಬಿದಿರೆ ಮಾರ್ಕೆಟ್ ಕಟ್ಟಡ ವಿವಾದ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಕೊನೆಗೂ ಅಂತಿಮ ತೀರ್ಪು ಬಂದಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ, ಮೂಡುಬಿದಿರೆ ಪುರಸಭೆ ಹಾಗೂ ಮಾರ್ಕೆಟ್ ಕಟ್ಟಡಕ್ಕೆ ಪೂರಕವಾದ ತೀರ್ಪು ನೀಡಲಾಗಿದೆ ಎಂದು ತಿಳಿದುಬಂದಿದೆ.

ಸುದೀರ್ಘ ಕಾಲದ ವಿಚಾರಣೆ ನಂತರ, ಹೈಕೋರ್ಟ್ ಪುರಸಭೆಗೆ ಮೂರು ವಾರಗಳಲ್ಲಿ ಪ್ರಾಚ್ಯ ಇಲಾಖೆಗೆ ಕಟ್ಟಡ ಕಾಮಗಾರಿ ಮುಂದುವರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಆದೇಶ ನೀಡಿದ್ದು, ಪ್ರಾಚ್ಯ ಇಲಾಖೆ ಅದರ ನಂತರ ನಾಲ್ಕು ವಾರಗಳಲ್ಲಿ ಅನುಮತಿ ನೀಡಬೇಕೆಂದು ಆದೇಶಿಸಿದೆ.

ಖಾಸಗಿ ಸಹಭಾಗಿತ್ವದಡಿಯಲ್ಲಿ ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲ್ಪಡುವ ಸುಸಜ್ಜಿತ ಮಾರ್ಕೆಟ್ ಕಟ್ಟಡದ ಕಾಮಗಾರಿಯನ್ನು ಮೂಡುಬಿದಿರೆ ಪುರಸಭೆ ಮುಂದಾಳತ್ವ ವಹಿಸಿತ್ತು. ಹಳೆಯ ಮಾರ್ಕೆಟ್‌ನ ವ್ಯಾಪಾರಸ್ಥರನ್ನು ತಾತ್ಕಾಲಿಕವಾಗಿ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು.

ಆದರೆ, ಪುರಸಭೆಯವರು ಪ್ರಾಚ್ಯ ಇಲಾಖೆಯ ಅನುಮತಿ ಪಡೆಯದೆ ಕಟ್ಟಡ ಕಾಮಗಾರಿ ಮುಂದುವರಿಸಿದ್ದರಿಂದ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಹಿನ್ನೆಲೆಯಲ್ಲಿ ಹೈಕೋರ್ಟ್ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ನೀಡಿದ ನಂತರ, ಕಾಮಗಾರಿ ಸ್ಥಗಿತಗೊಂಡಿತ್ತು.

ಶುಕ್ರವಾರದ ವಿಚಾರಣೆಯಲ್ಲಿ, ಪ್ರಾಚ್ಯ ಇಲಾಖೆ ಮತ್ತು ಪುರಸಭೆಯ ನಡುವಿನ ಬಿಕ್ಕಟ್ಟಿಗೆ ಪರಿಹಾರ ಸಿಕ್ಕಿದ್ದು, ಪುರಸಭೆಯು ಸೂಕ್ತ ಅನುಮತಿ ಪಡೆದುಕೊಂಡು ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ.

ಈ ತೀರ್ಪು ನಂತರ, ಮೂಡುಬಿದಿರೆ ಮಾರ್ಕೆಟ್ ಕಟ್ಟಡದ ಕಾಮಗಾರಿ ಮತ್ತೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂಬ ನಿರೀಕ್ಷೆಯು ಮೂಡುಬಿದಿರೆ ಜನರ ನಡುವೆ ಮೂಡಿಬಂದಿದೆ.

ADVRTISEMENT

Leave a Reply

Your email address will not be published. Required fields are marked *