ವಿದ್ಯೆಯೆಂಬುದು ಮನುಷ್ಯನ ಪ್ರಶಸ್ತಿ ಪಾತ್ರದಲ್ಲಿ ಇರುವುದಲ್ಲ  ಅವನ ವ್ಯಕ್ತಿತ್ವದಲ್ಲಿರುತ್ತದೆ -ಡಾ. ಎಂ ಬಿ ಪುರಾಣಿಕ್

ಮೂಡುಬಿದಿರೆ:”ವಿದ್ಯಾರ್ಥಿಗಳಾದವರು ತಮ್ಮ ವ್ಯಕ್ತಿತ್ವ, ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ನಮ್ಮ ದೇಶ, ನಮ್ಮ ಸಮಾಜ, ನಮ್ಮ ಕುಟುಂಬ ಎಂಬ ಭಾವನೆಯನ್ನು ಹೊಂದಿರಬೇಕು ಅಲ್ಲದೇ ನೈತಿಕ ಮೌಲ್ಯವನ್ನು ಬೆಳೆಸುವುದರೊಂದಿಗೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಮಾನವೀಯತೆ. ವಿದ್ಯೆಯೆಂಬುದು ಮನುಷ್ಯನ ಪ್ರಶಸ್ತಿ ಪಾತ್ರದಲ್ಲಿ ಇರುವುದಲ್ಲ ಬದಲಾಗಿ ಅವನ ವ್ಯಕ್ತಿತ್ವದಲ್ಲಿರುತ್ತದೆ” ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ ಬಿ ಪುರಾಣಿಕ್ ಹೇಳಿದರು.
ಅವರು ಎಕ್ಸಲೆಂಟ್ ಸಿಬಿಎಸ್ ನ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
   ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ “ಪುಸ್ತಕದ ವಿದ್ಯೆಯನ್ನು ಮಸ್ತಕಕ್ಕೆ ತೆಗೆದುಕೊಳ್ಳಬೇಕು” ವಿದ್ಯಾರ್ಥಿಯಾದವನು ಜೀವನದ ನಾಲ್ಕು ಕಂಬಗಳಾದ ಹೆತ್ತವರು, ಸಮಾಜ, ಗುರು ಹಿರಿಯರು ಹಾಗೂ ಸ್ನೇಹಿತರನ್ನು ಹೊಂದಿರಬೇಕು, ಎಂದು   ತಿಳಿಸಿದರು.
ಮುಖ್ಯ ಅತಿಥಿ ಮಾಜಿ ಎಪಿಎಂಸಿ ಅಧ್ಯಕ್ಷ  ಕೃಷ್ಣರಾಜ ಹೆಗ್ಡೆ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟಿನಿಂದಲೇ ಪ್ರತಿಭೆ ಬಂದಿರುತ್ತದೆ. ಅದು ಹೊರ ಹೊಮ್ಮಬೇಕಾದರೆ ವ್ಯಕ್ತಿಗೆ ಸೂಕ್ತ ವೇದಿಕೆ ಬೇಕು, ಸೂಕ್ತ ವಾತಾವರಣ ಹಾಗೂ ಪ್ರೋತ್ಸಾಹ ಬೇಕು. ಶಿಕ್ಷಣವು ಕೇವಲ ಪುಸ್ತಕದ ಬದನೆಕಾಯಿ ಆಗದೇ ಅದು ನೈಜ ರೀತಿಯಲ್ಲಿ ಇರಬೇಕೆಂದರು.
   ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್  ಅಧ್ಯಕ್ಷೀಯ ಮಾತುಗಳನ್ನಾಡಿ ವಿದ್ಯಾರ್ಥಿಗಳಾದವರು ಓದು -ಬರಹದ ಜೊತೆಗೆ ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು. ಒಳ್ಳೆಯ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು. ಹೆತ್ತವರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯಾಗಬೇಕೆಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ  ರಶ್ಮಿತಾ ಜೈನ್  ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮೂಲಕ ಶುಭ ಹಾರೈಸಿದರು.
ಪ್ರಾಂಶುಪಾಲರಾದ ಸುರೇಶ್  ಅವರು ಶಾಲಾ ಶೈಕ್ಷಣಿಕ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮಾಜಿ ಉಪಾಧ್ಯಕ್ಷೆ ಸುಜಾತ, ಆಡಳಿತ ನಿರ್ದೇಶಕರಾದ ಬಿ. ಪಿ ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಬಿ ಪುಷ್ಪರಾಜ್, ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ನಿಶಾಂತ್ ಪಿ ಹೆಗ್ಡೆ, ಶಾಲಾ ವಿದ್ಯಾರ್ಥಿ ನಾಯಕ ಪೃಥ್ವಿರಾಜ್ ಹಾಗೂ ನಾಯಕಿ ಸಾತ್ವಿಕ ಉಪಸ್ಥಿತರಿದ್ದರು.
ಶಿಕ್ಷಕಿ ಸ್ವಾತಿ ನಿರೂಪಿಸಿ, ಶೈಕ್ಷಣಿಕ ಸಂಯೋಜಕರಾದ ಪ್ರಸಾದ್ ಸ್ವಾಗತಿಸಿದರು. ಕುಮಾರಿ ಸಾತ್ವಿಕ ರವರು ಧನ್ಯವಾದಗೈದರು.

ADVRTISEMENT

Leave a Reply

Your email address will not be published. Required fields are marked *