ಮೂಡುಬಿದಿರೆ: ದರಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಮತ್ತು ಬೋರುಗುಡ್ಡೆ ಪ್ರದೇಶಗಳನ್ನು ಸಂಪರ್ಕಿಸುವ ಬಿರ್ಮೆರಬೈಲು ಸೇತುವೆ ಭಾರೀ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು, ಇದರಿಂದಾಗಿ ಗ್ರಾಮಸ್ಥರಿಗೆ ಪ್ರಯಾಣದಲ್ಲಿ ತೊಂದರೆ ಉಂಟಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು, ಭಾನುವಾರ ಗ್ರಾಮಸ್ಥರು ತಾತ್ಕಾಲಿಕ ಸೇತುವೆ ನಿರ್ಮಿಸಿ ಗಮನ ಸೆಳೆದಿದ್ದಾರೆ.
ಬಿರ್ಮೆರಬೈಲು ಸೇತುವೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಅಡಿಕೆ ಮರಗಳನ್ನು ಬಳಸಿ, ಪಾದಚಾರಿಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಕಿರು ಸೇತುವೆ ನಿರ್ಮಿಸಿದ್ದಾರೆ. ಈ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮುನಿರಾಜ್ ಹೆಗ್ಡೆ, ದೀಕ್ಷಿತ್ ಪಣಪಿಲ, ಬಿಜೆಪಿ ಮುಖಂಡ ಅಶ್ವತ್ ಪಣಪಿಲ ಮತ್ತು ಇನ್ನಿತರ ಗ್ರಾಮಸ್ಥರು ಸೇರಿಕೊಂಡು ಕೆಲಸ ಮಾಡಿದ್ದಾರೆ.
ಹೇಮಾ ಅರ್ಥ್ ಮೂವರ್ಸ್ ಪ್ರಸನ್ನ ಕೋಟ್ಯಾನ್ ಅವರ ನೇತೃತ್ವದಲ್ಲಿ ಜೆಸಿಬಿ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಯಿತು. ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಹಾಗೂ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯ ರುಕ್ಕಯ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿರ್ಮೆರಬೈಲು ಸೇತುವೆ ಕೊಚ್ಚಿ ಹೋಗಿದ ಬೆನ್ನಿಗೇ ಶಾಸಕ ಉಮಾನಾಥ ಎ. ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ತಾತ್ಕಾಲಿಕ ಸೇತುವೆಯ ನಿರ್ಮಾಣದಿಂದ ಗ್ರಾಮಸ್ಥರಿಗೆ ತಾತ್ಕಾಲಿಕವಾಗಿ ಸಂಚಾರದಲ್ಲಿ ಅನುಕೂಲವಾಗಿದೆ.
Leave a Reply