ಮೂಡುಬಿದಿರೆ: ಅಸಂಘಟಿತ ಕಾರ್ಮಿಕರು, ಬಡವರು ಹಸಿವಿನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನನ್ನು ಆರಂಭಿಸಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿನ ಆಡಳಿತ ಸೌಧದ ಎದುರು ಅವರು ಬುಧವಾರ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸಿ ಮಾತನಾಡಿದರು. ಅಗ್ಗದ ದರದಲ್ಲಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಸಿಗುತ್ತದೆ. ಬಡವರ ಹಸಿವು ನೀಗಿಸುವ ಇಂತಹ ಉತ್ತಮ ಸೌಲಭ್ಯ ದೇಶದ ಬೇರೆ ಯಾವ ರಾಜ್ಯಗಳಲ್ಲು ಇಲ್ಲ. ಬಡವರ ಭದ್ರತೆಗಾಗಿ ಇಂದಿರಾಗಾಂಧಿ ಪಡಿತರ ವ್ಯವಸ್ಥೆ, ಪಿಂಚಣಿ ವ್ಯವಸ್ಥೆ, ನಿವೇಶನ ರಹಿತರಿಗೆ ಭೂಮಿ ನೀಡಿದ್ದರು. ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ಸರಕಾರದ ಯೋಜನೆಗಳು ಜನರಿಗೆ ನೇರವಾಗಿ ಸಿಗಬೇಕೆಂಬುದು ಎಲ್ಲರ ಉದ್ದೇಶವಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ `ಹಸಿವು ಮುಕ್ತ ಕರ್ನಾಟಕ’ ಎಂಬ ಧೇಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ಈ ಯೋಜನೆಗೆ ಹಿನ್ನಡೆ ಆಗಿತ್ತು ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಮುಖ್ಯಾಧಿಕಾರಿ ಇಂದು ಎಂ., ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Leave a Reply