ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಉದ್ಘಾಟನೆಯ ಬಳಿಕ ಮೂಡಿಬಂದದ್ದು, ಶ್ರದ್ಧೆ-ಭಕ್ತಿಯ ನಾಡು-ನುಡಿಯ ಕಲಾ ವೈಶಿಷ್ಟ್ಯತೆಯ ಸಾಂಸ್ಕೃತಿಕ ವೈಭವ. ಭಾರತದ ಭವ್ಯ ಸಂಸ್ಕೃತಿಯ ಕಲಾರೂಪವೇ ಧರೆಗಿಳಿದು ಬಿದಿರೆಯ ನಾಡಿಗೆ ಬಂದಂತೆ ನೋಡುಗರ ಕಣ್ಮಣ ಸೆಳೆಯಿತು. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುತ್ತ ತುದಿವರೆಗಿನ ವೈವಿಧ್ಯ ಕಲಾಪ್ರಕಾರಗಳೂ ಮಾತ್ರವಲ್ಲ, ಶ್ರೀಲಂಕಾ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಶ್ರೀಮಂತಿಕೆಗೆ ಆಳ್ವಾಸ್ ಆವರಣ ಸಾಕ್ಷಿಯಾಯಿತು.
ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾವರ್ಯ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸ್ವಾಮೀಜಿ, ಕೊಂಡವೂರು, ಮಾಣಿಲ ಮೋಹನದಾಸ ಸ್ವಾಮೀಜಿ ಹಾಗೂ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು ವೇದಿಕೆಯ ಬಲಭಾಗದಲ್ಲಿದ್ದ ರಥದಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.
ನಿಗದಿಯಂತೆ ಕ್ಲಪ್ತ ಸಮಯಕ್ಕೆ ಆರಂಭಗೊಂಡ ಈ ಭವ್ಯ ಸಾಂಸ್ಕೃತಿಕ ಮೆರವಣಿಗೆಯು ಜಾತ್ರೆಯ ಮೆರುಗನ್ನು ಮೂಡಿಸಿತು. ಇಕ್ಕೆಲೆಗಳಲ್ಲಿ ರಥದ ಸ್ವರೂಪ, ಯಕ್ಷ ಕಿರೀಟ, ಮುಖವಾಡ, ನವಿಲು, ಗಣಪ, ಬೃಹತ್ ಕಾಲುದೀಪಗಳಿಂದ ಶೋಭಾಯಮಾನವಾದ ಸಭಾಂಗಣದಲ್ಲಿ ಸಂಜೆ 6.35ರಿಂದ ರಾತ್ರಿ 8.30ರ ವರೆಗೆ 150ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 4000 ಸಾವಿರಕ್ಕೂ ಮಿಕ್ಕಿದ ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಇಂದ್ರಲೋಕವೇ ಧರೆಗಿಳಿದು ಬಂದಂತೆ, ಪುಟಾಣಿಗಳಿಂದ ಹಿಡಿದು ಹಿರಿಯರೆಲ್ಲ ಸೇರಿದ್ದ ಸಭಾಂಗಣವಿಡೀ ನಂದನವನದಂತೆ ಕಂಡು ಬಂತು.
ಆ ಬಳಿಕ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ಹುಲಿ, ಸಣ್ಣ ರಥದಲ್ಲಿ ವಿಘ್ನನಿವಾರಕ ಗಣಪತಿ ಹಾಗೂ ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು. ರಥದಲ್ಲಿ ಪೀಠಸ್ಥರಾದ ಮರ್ಯಾದಾ ಪುರುಷೋತ್ತಮ ಶ್ರೀರಾಮ ಹಾಗೂ ಜೀವನೋಲ್ಲಾಸದ ಪ್ರತೀಕ ಶ್ರೀ ಕೃಷ್ಣಾದಿ ಆರೂಢ ದೇವರ ಮೆರವಣಿಗೆಯೊಂದಿಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಶ್ರದ್ಧೆ ಭಕ್ತಿಯಿಂದ ನಡೆಯಿತು.
ರಥಯಾತ್ರೆಯ ಮುಂಭಾಗದಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. ರ‍್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು.
ಹರಿದ್ವಾರದಿಂದ ಬಂದ ವಿಪುಲ್ ರ‍್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ -ಭಕ್ತಿಯ ಪ್ರಜ್ವಲನವಾಯಿತು. ಭಕ್ತರು ಜಯಕಾರ ಹಾಕಿದರು. ಭಕ್ತರು ಭಾವಪರವಶರಾದರು. ಆಗಸದಲಿ ಮೂಡಿದ ಪಟಾಕಿಯ ಸಿಂಚನ- ಸಿಡಿಮದ್ದು ಜಾತ್ರೆಯನ್ನು ನೆನಪಿಸಿತು.
