ಮೂಡುಬಿದಿರೆ: ಆಳ್ವಾಸ್ ವಿರಾಸತ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನದ ಬಳಿಕ ಸುಧೆಯಾಗಿ ಹರಿದದ್ದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರ ಸ್ವರ ಮಾಧುರ್ಯ.
ಶ್ರೀ ರಾಗದ ಮೂಲಕ ಕಛೇರಿ ಆರಂಭಿಸಿದ ಅವರು ಮುರಲೀ ಸ್ತುತಿಸುತ್ತಾ ‘ಆನಂದ ದೇ ಮುಖ ಚಂದ್ರ ಐ ಸೇ ಚಾಂದನಿ ಸಾಂದ್ರ…’ಬಾದಲ್ ಆಯೇ ನಭಾ ಮೇ…ಯಾದ’ ಸಂಗ
ಶ್ರೋತ್ರವಿನ ಯೋಚನಾ ಲಹರಿಗೆ ತೆರೆದುಕೊಳ್ಳುವ ಪುರಾತನ ಶ್ರೀ ರಾಗ ಹಾಡಿದ ಅವರು, ‘ ಗಾಯನ ಕೇಳುಗರಿಗೆ ಸುಲಲಿತ ಹಾಗೂ ಇಂಪಾಗಿರಬೇಕು’ ಎಂದು ಕೇಳುವುದನ್ನೂ ತಿಳಿಸಿ ಕೊಟ್ಟ ಅವರು ಆಲಿಸುವ ಮನಸ್ಸು ತಂಪಾಗಿರಬೇಕು ಎಂದರು.
ಶ್ರೀ ರಾಗದ ಮೂಲಕ ಮುಸ್ಸಂಜೆಯ ಹೊತ್ತಲ್ಲಿ ಬದ್ಧತೆ ಹಾಗೂ ಭಕ್ತಿಯನ್ನು ಮೂಡಿಸಿದರು.
ಬಳಿಕ, ‘ಕಮಲೇ… ಕಮಲಾಲಯೇ ಕಮಲ ಭವಾದಿ ಸುರ ವಂದಿತ ಪದೇ… ತ್ರಿಗುಣಾಭಿಮಾನಿಯೇ’ ಎಂದು ಲಕ್ಷ್ಮೀ ಸ್ತುತಿಯನ್ನು ಪ್ರದೀಪ ಮತ್ತು ಮಿಶ್ರ ರಾಗದಲ್ಲಿ ಹಾಡಿ ಪ್ರೇಕ್ಷಕರ ಮನದಲ್ಲಿ ಭಕ್ತಿಯ ಕಡಲನ್ನು ಪಸರಿಸಿದರು.
‘ಬಂದದ್ದು ಸರ‍್ಥಕ ಆತು. ನಾ ಹೆಂಗಾರ ಹಾಡ್ಲಿ… ಹಾಡ್ಲಿಕ್ಕಾ ಹುರಪು ಕೊಡ್ತೀರಲ್ಲಾ… ‘ ಎಂದು ಪ್ರೇಕ್ಷಕರ ಉದ್ಘೋಷ ಕಂಡು ಧನ್ಯತೆ ತಿಳಿಸಿದರು.
ನಂತರ ವೆಂಕಟೇಶ್ ವಚನದತ್ತ ರಾಗ ಹೊರಳಿಸಿದ ಅವರು ‘ಅಕ್ಕಾ ಕೇಳವ್ವಾ ನಾ ಕನಸೊಂದ ಕಂಡೆ, ಅಕ್ಕಿ ಅಡಕೆ ಓಲೆ ತೆಂಗಿನಕಾಯಿ’ ಎಂದು ಅಕ್ಕಮಹಾದೇವಿ ವಚನಗಳನ್ನು ಹಾಡಿದರು.
‘ಕೂಗಿದರೂ ದನಿ ಕೇಳದೇ … ಕೃಷ್ಣಾ’ ಎಂದು ಬೀಮ ಪಾಲಸ ರಾಗದಲ್ಲಿ ಕೃಷ್ಣನ ಸ್ತುತಿಸಿದರು.
ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಗೆ ಹೆಚ್ಚು ಖ್ಯಾತಿಯನ್ನು ಪಡೆದ ಕನಕದಾಸರ ಹರಿಭಕ್ತಿಯ ‘ತೊರೆದು ಜೀವಿಸಬಹದೇ ಹರಿ ನಿನ್ನ ಚರಣಗಳ, ಬರಿದೆ ಮಾತೇಕಿನ್ನು ಅರಿ ಪೇಳುವೆನಯ್ಯಾ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು’ ಎಂದಾಗ ಕೃಷ್ಣ ಭಕ್ತಿಯಲ್ಲಿ ಸಭಾಂಗಣವೇ ಭಾವಪರವಶವಾಯಿತು. ಕರತಾಡನದ ಅಲೆ ಉಕ್ಕಿ ಬಂತು. ‘ತೊರೆದು ಜೀವಿಸ ಬಹುದೇ…’ ಎಂದು ಶ್ರೋತ್ರುಗಳು ದನಿ ನೀಡಿದರು. ‘ಆದಿಕೇಶವರಾಯ… ಎಂಬ ಏರುಗತಿಗೆ ಪ್ರೇಕ್ಷಕರು ಮೂಕವಿಸ್ಮಿತರಾದರು.
‘ಇಲ್ಲಿನ ವಿದ್ಯಾರ್ಥಿಗಳು ಸಂಗೀತ ಆಸಕ್ತಿ ವ್ಯಕ್ತಪಡಿಸಿದರು. ನಿಮಗೆ ಕಲಿಕೆ ಜೊತೆ ಆಳ್ವಾಸ್ ನಲ್ಲಿ ಸಂಸ್ಕಾರ ಕೊಡುತ್ತಾರೆ. ಒಳ್ಳೆಯ ವಿದ್ಯಾ ಸಂಸ್ಥೆ’ ಎಂದು ವೆಂಕಟೇಶ್ ಶ್ಲಾಘಿಸಿದರು.
ಒಂದು ಕಾಲದಲ್ಲಿ ಲತಾ ಮಂಗೇಶ್ಕರ್ ಸ್ವರದಲ್ಲಿ ಖ್ಯಾತಿ ಪಡೆದಿದ್ದ, ‘ಪಾವೋಜಿ ಮೈನೇ.. ರಾಮ ರತನ್ ಧನ್ ಪಾಯೋ..’ ಹಾಡಿದಾಗ ಮಹಿಳೆಯರೆಲ್ಲ ತಲೆದೂಗಿದರು.
‘ ಪಾರ್ವತಿಯೇ ದೇವಿಯೇ, ಗಿರಿಜೆಯೇ, ಕಲ್ಯಾಣಿಯೇ… ರ‍್ವ ಮಂಗಳ ದೇವಿಯೇ’… ಎನ್ನುತ್ತಾ ಶಂಕರನ ರಾಣಿ ಪಾರ್ವತಿಯನ್ನು ಸ್ಮರಸಿದರು.
ಮುಸ್ಸಂಜೆಯ ಹೊಂಗಿರಣದ ನಡುವೆ ವರ್ಣಮಯ ಬೆಳಕಿನ ಚಿತ್ತಾರ ಹಾಗೂ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ್ದ ಬೃಹತ್ ಸಭಾಂಗಣದಲ್ಲಿ ಗ್ವಾಲಿಯರ್ ಘರಾಣಾದ ವೆಂಕಟೇಶ್ ಸುಮಧುರ ಗಾನದ ಹೊಳೆ ಹರಿಸಿದರು.
ಜನಪದ ಗಾಯನದ ಕುಟುಂಬದಿಂದ ಬಂದು, ಗದಗದ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಭಕ್ತಿ ಸಂಗೀತದ ಲಹರಿಯನ್ನು ನಾಡಿನಾದ್ಯಂತ ಹರಿಸಿದ ವೆಂಕಟೇಶರ ಹರಿಸ್ತುತಿಗೆ ಮಾರು ಹೋಗದವರಿಲ್ಲ. ಮಂಗಳವಾರ ಭಕ್ತಿಯ ವೈಭವ ಕಂಡಿದ್ದ ಪ್ರೇಕ್ಷಕರು ಬುಧವಾರ ಭಕ್ತಿ ಲಯದಲ್ಲಿ ಮುಳುಗಿದರು. ಸ್ವರ ಲೋಕದಲ್ಲಿ ಮಿಂದೆದ್ದರು.
ಪಂಡಿತ್ ಭೀಮಸೇನ ಜೋಶಿ ಮೆಚ್ಚಿಗೆ ಸೂಚಿಸಿದ್ದ ಸ್ವರದ ಲಾಲಿತ್ಯಕ್ಕೆ ಸೇರಿದವರೆಲ್ಲ ಮಾರು ಹೋದರು. ಹರಿಸ್ಮರಣೆ, ಭಕ್ತಿ ಸುಧೆ ಮತ್ತೆ ಅದೇ ನಿನಾದ..
ಹಾರ್ಮೋನಿಯಂ ನಲ್ಲಿ ನರೇಂದ್ರ ಎಲ್. ನಾಯಕ್, ತಬಲಾದಲ್ಲಿ ಕೇಶವ ಜೋಶಿ ಮತ್ತು ವಿಘ್ನೇಶ್ ಕಾಮತ್ ಹಾಗೂ ತಾನ್ ಪುರಾ (ತಂಬೂರಿ)ದಲ್ಲಿ ರಮೇಶ ಕೋಲಕುಂದ ಮತ್ತು ರಾಘವ ಹೆಗಡೆ ಶಿರಸಿ ಹಾಗೂ ತಾಳದಲ್ಲಿ ವಿನೀತ್ ಭಟ್ ಕೋಟೇಶ್ವರ ಸಾಥ್ ನೀಡಿದರು. ಮಾಧವಿ ಮತ್ತು ಮೇಘ ಕಾರ‍್ಯಕ್ರಮ ನಿರೂಪಿಸಿದರು.

Leave a Reply