ಮೂಡುಬಿದಿರೆ: ‘೩೦ ನೇ ಆಳ್ವಾಸ್ ವಿರಾಸತ್’ನಲ್ಲಿ ಉತ್ತರದ ಹಿಂದೂಸ್ತಾನಿ, ಪಶ್ಚಿಮದ ಗುಜರಾತಿ, ಪೂರ್ವದ ಕೋಲ್ಕತ್ತಾ ಸಂಗೀತದ ನಿನಾದ ಸವಿದ ಪ್ರೇಕ್ಷಕರಿಗೆ ಶನಿವಾರ ದಕ್ಷಿಣ ದ್ರಾವಿಡ ಸಾಹಿತ್ಯ-ಸಂಗೀತ ಲೋಕದ ಸಂಭ್ರಮ. ಕನ್ನಡ, ತಮಿಳು, ತೆಲುಗು, ಮಲೆಯಾಳ, ಸ್ವಲ್ಪ ಹಿಂದಿ ಮಿಶ್ರಣ ‘ವುಡ್’ಗಳ ಸಿನಿಮಾ ಹಾಡುಗಳ ಸಿಂಚನವು ಆಳ್ವಾಸ್ ವಿರಾಸತ್ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಚೆನ್ನೈಯ ಸ್ಟೆಕೇಟೋ ಬ್ಯಾಂಡ್ ತಂಡವು ನಿರಂತರ ಅಬ್ಬರದಲ್ಲಿ ನಡೆಸಿಕೊಟ್ಟ ಸಂಗೀತ ರಸಸಂಜೆಯ ಆರಂಭದಲ್ಲಿ ವಯೋಲಿನ್ ನಲ್ಲಿ ಸಾಯಿ ರಕ್ಷಿತ್ ಅವರು ಮಣಿರತ್ನಂ ನಿರ್ದೇಶನದ ‘ರೋಜಾ’ ಸಿನಿಮಾದ ‘ರೋಜಾ ಜಾನೇ ಮನ್’ ನುಡಿಸುವ ಮೂಲಕ ಸಂಗೀತ ರಸ ಸಂಜೆಗೆ ನಾಂದಿ ಹಾಡಿದರು.
ಬಳಿಕ ಏರುದನಿಯಲ್ಲಿ ಹಾಡುತ್ತಲೇ ವೇದಿಕೆ ಬಂದದ್ದು ಗಾಯಕ ದೀಪಕ್, ಕರಾವಳಿ ಕುವರ ರಕ್ಷಿತ್ ಶೆಟ್ಟಿಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ, ‘ಚರಿತ್ರೆ ಸೃಷ್ಟಿಸೋ ಅವತಾರ’ ಹಾಡಿ ಪ್ರೇಕ್ಷಕರಿಗೆ ಇನ್ನಷ್ಟು ಜೋಶ್’ ನೀಡಿ ಹುರಿದುಂಬಿಸಿದರು.
ಬಳಿಕ ದೀಪಕ್ ‘ಪುಷ್ಪ’ ಸಿನಿಮಾದ ‘ನೋಟ ಬಂಗಾರವಾಯಿತೇ ಶ್ರೀವಲ್ಲಿ ಮಾತೇ ಮಾಣಿಕ್ಯವಾಯಿತೇ’ಯ ತೆಲುಗು ಹಾಡು ಹಾಡಿದರು. ಈ ಹಾಡು ಮಹಿಳೆಯರಿಗಾಗಿ ಎಂದ ನಿರಂಜನಾ ರಮಣನ್ ‘ಜಬ್ ತಕ್ ಹೇ ಜಾನ್’ ಸಿನಿಮಾದ ‘ ಜಿಯಾ ಜಿಯಾ ರೇ ಜಿಯಾ’ ಹೆಜ್ಜೆ ಹಾಕುತ್ತಲೇ ಹಾಡಿದರು.
ಸಂಗೀತ ರಸಸಂಜೆಯಲ್ಲಿ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ ಹೆಚ್ಚಿನ ಹಾಡುಗಳನ್ನು ಆಯ್ಕೆ ಮಾಡಿಕೊಂಡರು.
ನಂತರ ಕನ್ನಡ ಮಧುರ ಗೀತೆಗೆ ಬಂದ ಗಾನ ಮಂಜರಿಯು, ಮಣಿರತ್ನಂ ನಿರ್ದೇಶನದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾದ ‘ನಗುವಾ ನಯನಾ ಮಧುರಾ ಮೌನ’, ಹಾಡನ್ನು ಹಾಡಿದರು. ಇಳೆಯರಾಜ ಸಂಗೀತ ಸಂಯೋಜಿಸಿದ ಸಿನಿಮಾದ ಹಾಡು ಸಂಚಲನ ಸೃಷ್ಟುಸಿತು. ಪ್ರೇಕ್ಷಕರೂ, ‘ನಗುವಾ ನಯನಾ’ ಹಾಡಿಗೆ ಜೊತೆಯಾದರು.
ಬಳಿಕ, ‘ಜೀವ ಹೂವಾಗಿದೆ… ಸಂಜೆ ತಂಗಾಳಿ’ ಹಾಡಿದರು. ಪ್ರೇಕ್ಷಕರೆಲ್ಲ ಮೊಬೈಲ್ ಬೆಳಕನ್ನು ಬೀಸಿದಾಗ ಹೊಸ ಲೋಕ ಸೃಷ್ಟಿಯಾಯಿತು. ನಂತರ ಶಂಕರನಾಗ್ ಅವರ ‘ಗೀತಾ’ ಸಿನಿಮಾದ ‘ ಜೊತೆಯಲಿ ಜೊತೆಯಲಿ’ ಹಾಡಿದರು. ಪ್ರೇಕ್ಷಕರೂ ಹಾಡಿದರು. ನಂತರ ತೆಲುಗಿನಲ್ಲಿ ‘ಪುಷ್ಪ’ ಸಿನಿಮಾದ ‘ಪುಷ್ಪ ಪುಷ್ಪ ಪುಷ್ಪ’ ಹಾಡು ದೀಪಕ್ ಹಾಡಿದರು.
ವೈರಲ್ ಆಗಿರುವ ಮೊಬೈಲ್ ರಿಂಗ್ ಟೋನ್ ನಾದವನ್ನು ಸಾಯಿ ರಕ್ಷಿತ್ ವಯೋಲಿನ್ ನಲ್ಲಿ ನುಡಿಸಿದರು. ತಮಿಳು ಹಾಡನ್ನು ಗೌತಮ್ ಹಾಡಿದರು.
ನಂತರ ಗೌತಮ್ ಅವರು ರಾಜ್ ಕುಮಾರ್ ನಟಸಿ, ಹಾಡಿದ ಆಕಸ್ಮಿಕ ಸಿನಿಮಾದ ಹಂಸಲೇಖ ಸಂಯೋಜನೆಯ ‘ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡಿದರು.
ಗೌತಮ್ ಜೊತೆಯಾಗಿ, ಮಾಧುರಿ ದೀಕ್ಷಿತ್ ಮಾಂತ್ರಿಕತೆಯ ‘ಪುಕಾರ್’ ಸಿನಿಮಾದ ‘ಹೇ ನವ್ ಜವಾನೋ ಬಾತ್ ಮಾನೋ’ ಹಾಡಿದರು. ಗೌತಮ್ ‘ಅಲ್ಫೋ ಅಲ್ಲಾ ಅಲ್ಲಾ’ ಹಾಡಿದರು. ಬಳಿಕ ‘ಉಫ್ ತೇರಿ ಅದಾ…’ ಅಬ್ಬರ. ನಿರಂಜನಾ ‘ದಿಲ್ ಸೇ’ ಸಿನಿಮಾದ ‘ ಚಲೇ ಛಯ್ಯಾಂ ಛಯ್ಯಾಂ’ ಹಾಡಿದಾಗ ಕೇಳುಗರೆಲ್ಲ ರೈಲಿನ ಪ್ರಯಾಣದ ಸಂಭ್ರಮದಲ್ಲಿ ಮುಳುಗಿದರು.
ಅನೂಪ್ ಭಂಡಾರಿ ನಿರ್ದೇಶನದ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ತುಳು ಶಬ್ದ ಭಂಡಾರಗಳನ್ನು ಹೊಂದಿದ ‘ಎಕ್ಕಸಕ್ಕ ರಾ ರಾ’ ಹಾಡಿದಾಗ ಮಕ್ಕಳೆಲ್ಲ ಕುಳಿತಲ್ಲೆ ನೃತ್ಯವಾಡಿದರು. ಬಳಿಕ ನಿರಂತರವಾಗಿ ‘ಏ ಜವಾನಿ ಏ ದಿವಾನಿ’ ‘ಜುಂಕಾ ಗಿರಾದೇ’ ‘ ಓ ರಾಧಾ ಮೇರಾ ಜುಮ್ಕಾ’ , ‘ದೇಸಿ ಗರ್ಲ್’ ಹಾಡುಗಳ ಫ್ಯೂಜನ್ ಹಾಡಿದರು. ‘ಯಾಮಿ ಯಾಮಿ ಟೂಟ್ ಗಯಾ’ ಪಂಜಾಬಿ ಸಂಗೀತವನ್ನು ಗೌತಮ್ ಉಣಬಡಿಸಿದರು.
ಬಳಿಕ ಸ್ಟೆಕೇಟೋ ಮಲೆಯಾಳದತ್ತ ಹೊರಳಿತು.’ಓಲುಲ್ಲೇರ್ ಓಲುಲ್ಲೇರ್ ಮಾಣಿನಗೇರ್’ ಎಂಬ ಮಲೆಯಾಳಿ ಸಿನಿಮಾದ (ಅಜಗಜಾಂತರA) ಹಾಡು ನಿರಂಜನಾ ಹಾಡಿದರು. ಕಣ್ಣೂರು ಮತ್ತು ಕಾಸರಗೋಡಿನ ಬೆಟ್ಟಗಾಡಿನಲ್ಲಿ ಬದುಕುವ ತುಳು ಭಾಷಿಕ ಮಾವಿಳ್ಳನ್ ಸಮುದಾಯದ ಜಾನಪದ ಹಾಡು ಇದಾಗಿದ್ದು, ಹಾಡು ಮಲೆಯಾಳದಲ್ಲಿದ್ದರೂ ತುಳು ಪದಗಳಿಂದಲೇ ತುಂಬಿದೆ. ತಮಿಳು, ಕನ್ನಡ, ಮಲೆಯಾಳದಂತೆ ತುಳು ಕೂಡಾ ದ್ರಾವಿಡ ಭಾಷೆಯಾಗಿದೆ. ಇದನ್ನು ಶುದ್ಧ ತುಳುವಿನ ಪಾಡ್ದನಗಳಲ್ಲಿ ‘ಓಲುಲ್ಲೇರ್ ಓಲುಲ್ಲೇರ್ ಮಾಣಿನಾಗೇರ್, ಮೂಲುಲ್ಲೇರ್ ಮೂಲುಲ್ಲೇರ್ ಮಾಣಿನಾಗೇರ್, ಮಾಣಿನಾಗೇರ್ ಪೆತ್ತ ಕೈಕಂಜಿ’ ಎಂದು ಹಾಡುತ್ತಾರೆ. ಬಳಿಕ ‘ಮಿನಾಟಿ’ ‘ಅಡಿ ಅಡಿ’ ಸಾಲುಗಳ ಅಬ್ಬರ. ಮಲೆಯಾಳದ ಬಳಿಕ ತಮಿಳು ಮಧುರಗೀತೆಗಳ ಫ್ಯೂಜನ್ ಗಾಯನ ತೇಲಿ ಬಂತು.
ಬಳಿಕ ಪುನೀತ್ ರಾಜ್ ಕುಮಾರ್ ಸ್ಮರಣೆಗೆ ವೇದಿಕೆ ಜಾರಿತು. ವಿಜಯ್ ಪ್ರಕಾಶ್ ಹಾಡಿದ, ‘ಗೊಂಬೆ ಹೇಳುತ್ತೈತೆ…’ ಹಾಡಿದಾಗ ಎಲ್ಲ ವೀಕ್ಷಕರು ಹಾಡಿಗೆ ಜೊತೆಯಾದರು. ಭಾವನಾತ್ಮಕ ಲೋಕವೊಂದಕ್ಕೆ ಬೆಳದಿಂಗಳು ಸೂಸಿ ಆಗಸದ ಪೂರ್ಣ ಚಂದ್ರನೂ ಸಾಥ್ ನೀಡಿದ.
‘ಸರೈನೋಡು’ ವಿನ ‘ಬ್ಲಾಕ್ ಬಾಸ್ಟರ್’, ‘ರಾನು ರಾನು’, ‘ಕುರ್ಚಿ ಮಡತಪೆಟ್ಟಿ’, ಹಾಡುಗಳ ಜೋಶ್ ಗೆ ಜನರೂ ಕೈಬೀಸಿ ಸಂತಸ ಪಟ್ಟರು. ಬಳಿಕ ವಿಜಯ್ ‘ಗಿಲ್ಲಿ’ ಹಾಡಿನ ಗೀಳಿನಲ್ಲಿ ಯುವಜನತೆ ಮುಳುಗಿದಾಗ ಡ್ರಮ್ಸ್ ನಲ್ಲಿ ಸಂದೀಪ್ ರಮಣನ್ ಚಮತ್ಕಾರ ಮಾಡಿಸಿದರು. ವಿದ್ಯಾರ್ಥಿಗಳ ‘ಹೇ ಹೇ’ ಉದ್ಘಾರ ಹೊಮ್ಮಿತು.
ಬಳಿಕ ಪುಷ್ಪದ ‘ರೌಡಿ ಬೇಬಿ’, ‘ಬೀಟ್’ ಹಾಡುಗಳನ್ನು ಹಾಡಿದರು. ಕೊನೆಯಲ್ಲಿ”ಸಾಮೇ ಸಾಮೇ’ ‘ ಆರ್ ಆರ್ ಆರ್’ ಸಿನಿಮಾದ ‘ನಾಟು, ನಾಟು,’ ಮೂಲಕ ಜನರ ಹುಚ್ಚೆಬ್ಬಿಸಿದರು. ಡ್ರಮ್ಸ್, ಗಿಟಾರ್ ಅಬ್ಬರದ ಜೊತೆ ಸಂಗೀತ ಸಂಜೆಗೆ ತೆರೆಬಿತ್ತು.
‘ಸ್ಟೆಕೇಟೋ’ ಎಂದರೆ ಪ್ರತಿ ಸ್ವರವನ್ನು ತೀವ್ರವಾಗಿ ನಿರ್ವಹಿಸುವುದು ಎಂದರ್ಥ. ಹೆಸರಿಗೆ ತಕ್ಕಂತೆ ತಂಡವು ಪ್ರದರ್ಶನ ನೀಡಿದ್ದು, ಸುಮಾರು ೭೫ ಸಾವಿರಕ್ಕೂ ಅಧಿಕ ಜನ ಹಿಡಿಯುವ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಜನ ಸಾಗರ ಲಕ್ಷದ ಲಕ್ಷ್ಯ ಹರಿಸಿತು.
ಶಾಸ್ತ್ರೀಯ ಸಂಗೀತ, ಆಧುನಿಕ ಸಂಗೀತ, ಸಿನಿಮಾ ಸಂಗೀತ, ಲಘು ಸಂಗೀತಗಳ ಮಿಶ್ರಣದ ಜೊತೆ ಆಧುನಿಕ ಸಂಗೀತದ ರಸದೌತಣ ದೊರೆಯಿತು
ಸಂಸ್ಥಾಪಕರಾದ ಆರ್.ಎಚ್. ವಿಕ್ರಂ ಅವರ ಸಂಗೀತ ಸಂಯೋಜನೆ ಹಾಗೂ ಕೀ ಬೋರ್ಡ್ ನಲ್ಲಿ ಶಲ್ಲು ವರುಣ್ (ಬೇಸ್ ಗಿಟಾರ್), ಅಭಿನಂದನ್ (ಗಿಟಾರ್ ವಾದಕ), ಸಂದೀಪ್ ರಮಣನ್ (ಡ್ರಮ್ಸ್), ಸೌರಭ್ ಜೋಶಿ (ವಾದ್ಯಮೇಳ ), ಸಾಯಿ ರಕ್ಷಿತ್ (ವಯೋಲಿನ್) ವಿಕ್ರಂ ಸಾರದಿ (ಕೀ ಬೋರ್ಡ್) ಹಾಗೂ ಹಾನೆಸ್ಟ್, ಶರತ್ ಹಾಗೂ ಗೋಕುಲ್ ಧ್ವನಿ ನಿರ್ವಹಣೆಯಲ್ಲಿ ಸಹಕರಿಸಿದರು. `ಎಲ್ಫೆ’ ಕೋರಸ್ ನೀಡಿತು.

Leave a Reply