ಮೂಡುಬಿದಿರೆ : ಮೂಡುಬಿದಿರೆ ತಾಲೂಕು ಕೇಂದ್ರವಾದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲ. ದಂತ ವೈದ್ಯರೇ ಸದ್ಯಕ್ಕೆ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.ಆದರೆ ಅವರಿಂದ ಎಲ್ಲವೂ ಸಾಧ್ಯವಿಲ್ಲ.ಬಡ ಜನರಿಗೆ ಸೇವೆ ಒದಗಿಸಬೇಕಾದ ಈ ಸರಕಾರಿ ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲದಿರುವುದು ನಮಗೆ ನಾಚಿಕೆಗೇಡು, ಈ ಬಗ್ಗೆ ತಕ್ಷಣ ನಿರ್ಣಯ ಕೈಗೊಂಡು ಆರೋಗ್ಯ ಸಚಿವರು,ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಪೂರ್ಣಕಾಲಿಕ ವೈದ್ಯರ ನೇಮಕಾತಿಗೆ ಆಗ್ರಹಿಸಬೇಕೆಂದು ಪುರಸಭಾ ಸದಸ್ಯ ಕೊರಗಪ್ಪ ಅವರು ಮಂಗಳವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಆಗ್ರಹಿಸಿದ್ದಾರೆ.
ಪುರಸಭಾ ಸದಸ್ಯ ಕೊರಗಪ್ಪ ಅವರು ಈ ಪ್ರಸ್ತಾಪಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿ
ಒಂದು ಪೋಸ್ಟ್ ಮಾರ್ಟಮ್ ಮಾಡಬೇಕಾದರೂ ಪಕ್ಕದ ಆಸ್ಪತ್ರೆಗಳ ವೈದ್ಯರನ್ನು ಕಾಯಬೇಕು,ಬೆಳಿಗ್ಗೆ ಶವವನ್ನು ಶವಾಗಾರದಲ್ಲಿಟ್ಟು ರಾತ್ರಿವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪುರಂದರ ದೇವಾಡಿಗ ಅವರು ಹೇಳಿದರೆ, ಹಿಂದೆ ಶಶಿಕಲಾ ಮೇಡಂ ಇರುವಾಗ ಬಡಜನರಿಗೆ ಒಳ್ಳೆಯ ಸೇವೆ ಸಿಗುತ್ತಿತ್ತು, ಆಬಳಿಕ ಯಾವ ಪೂರ್ಣಕಾಲಿಕ ವೈದ್ಯರೂ ಬರಲಿಲ್ಲ, ಬಂದರೂ ಉನ್ನತ ವ್ಯಾಸಂಗಕ್ಕಾಗಿ ಹೋಗಿದ್ದಾರೆ,ಹೀಗಾದರೆ ಬಡರೋಗಿಗಳು ಎಲ್ಲಿಗೆ ಹೋಗಬೇಕು ? ಎಂದು ಸುರೇಶ್ ಕೋಟ್ಯಾನ್ ಪ್ರಶ್ನಿಸಿದರು.
ಸದಸ್ಯರ ಆಗ್ರಹದಂತೆ ಆರೋಗ್ಯ ಸಚಿವರು,ಜಿಲ್ಲಾ ಆರೋಗ್ಯಾಧಿಕಾರಿ,ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯುವುದಾಗಿ ನಿರ್ಣಯಿಸಲಾಯಿತು.
ಕಳೆದ ವಿಶೇಷ ಸಭೆಯಲ್ಲಿ ಮೂಡುಬಿದಿರೆಯಲ್ಲಿ ಅಲ್ಲಲ್ಲಿ ಅನಧಿಕೃತವಾಗಿ ನಡೆಯುವ ಮೀನು ಮಾರಾಟಗಾರರೆಲ್ಲ ಮಾರುಕಟ್ಟೆಗೇ ಬರಬೇಕು ಎಂದು ನಿರ್ಧರಿಸಲಾಗಿತ್ತು. ಜ್ಯೋತಿನಗರದಲ್ಲಿ ಮೀನುಗಾರಿಕಾ ನಿಗಮದಡಿ ಕಾರ್ಯಾಚರಿಸುತ್ತಿರುವ ಮೀನು ಮಾರಾಟ ಕೌಂಟರ್‌ನಿಂದ ಸಮಸ್ಯೆಗಳಾಗುತ್ತಿರುವುದನ್ನು ಮೂವರು ಪುರಸಭೆ ಸದಸ್ಯರು ತಮ್ಮ ವಿರೋಧ ವ್ಯಕ್ತಪಡಿಸಿದ್ದ ಕಾರಣ ಆ ಕೌಂಟರ್ ನವರನ್ನೂ ಮಾರುಕಟ್ಟೆಗೇ ಬರಲು ನೋಟಿಸ್ ನೀಡಲಾಗಿತ್ತು. ಅದಕ್ಕೆ ಆ ಕೌಂಟರ್‌ನವರು ಸಕಾರಣ ಒಡ್ಡಿ ಒಪ್ಪಿರಲಿಲ್ಲ. ಆದರೆ, ನಿಯಮ ಪ್ರಕಾರ ಯಾರದಾದರೂ ವಿರೋಧ ಇದ್ದರೆ ಅದರನ್ನು ಪರಿಗಣಿಸಿ ಮುಂದಿನ ಕ್ರಮ ಜರಗಿಸಬೇಕು ಎಂದು ಪಿ.ಕೆ. ಥಾಮಸ್ ಮತ್ತಿತರರು ಆಗ್ರಹಿಸಿದರು. ಪುರಸಭೆ ಪರವಾನಿಗೆ ನೀಡಿ ಇದೀಗ ತೆರವು ಮಾಡಲು ನೋಟಿಸ್ ನೀಡುವುದು ಸರಿಯಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಹೇಳಿದರು.
ಮಾರ್ಕೆಟ್ ಬಳಿ ಇರುವ ಫಾಸ್ಟ್ ಫುಡ್ ಸ್ಟಾಲ್ ಗಳನ್ನು ಇನ್ನೂ ಸ್ಥಳಾಂತರಗೊಳಿಸಿಲ್ಲವೇಕೆ? ಅವರ ಬಗ್ಗೆ ಅಷ್ಟೊಂದು ಕನಿಕರವೇಕೆ ? ಸಾರ್ವಜನಿಕರಿಗೆ,ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ನಿತ್ಯ ಗಲಾಟೆ ನಡೆಯುತ್ತಿದೆ ಎಂದು ಹೇಳಿದರೂ ಆ ಸ್ಟಾಲ್ ಗಳನ್ನು ಸ್ಥಳಾಂತರಗೊಳಿಸಿಲ್ಲವೇಕೆ ಎಂದು ಪುರಂದರ ದೇವಾಡಿಗ ಅವರು ಪ್ರಶ್ನಿಸಿದಾಗ ‘ಅವರಿಗೆ ಇಂದಿರಾ ಕ್ಯಾಂಟಿನ್ ಬಳಿ ಜಾಗ ಗುರುತಿಸಲಾಗಿದೆ’ ಎಂದು ಮುಖ್ಯಾಧಿಕಾರಿ ಇಂದು ಎಂ.ಅವರು ಹೇಳಿದರು.
ಪುರಸಭಾಧ್ಯಕ್ಷೆ ಜಯಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ್ ಪೂಜಾರಿ,ಮಾಜಿ ಅಧ್ಯಕ್ಷರಾದ ಪ್ರಸಾದ್ ಕುಮಾರ್, ರೂಪಾ ಸಂತೋಷ್ ಶೆಟ್ಟಿ, ಸದಸ್ಯರಾದ ಪಿ.ಕೆ.ಥೋಮಸ್, ಸುರೇಶ್ ಪ್ರಭು, ಇಕ್ಬಾಲ್ ಕರೀಮ್, ಜೊಸ್ಸಿ ಮಿನೇಜಸ್, ಮಮತಾ ಆನಂದ್, ಶಕುಂತಲಾ ಹರೀಶ್, ಸೌಮ್ಯ ಸಂದೀಪ್, ದಿವ್ಯ ಜಗದೀಶ್, ಸುಜಾತ,ರಾಜೇಶ್ ನಾಯ್ಕ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

Leave a Reply