ಬೆಂಗಳೂರು: ಕರ್ನಾಟಕದ ಪ್ರಸಿದ್ಧ ನಿರೂಪಕಿ ಅಪರ್ಣ ಅವರು ನಿಧನ ಹೊಂದಿದ್ದಾರೆ. ಇಂದು ಸಂಜೆ ತಮ್ಮ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಸ್ಪಷ್ಟ ಕನ್ನಡದಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸಲು ಖ್ಯಾತರಾಗಿದ್ದ ಅಪರ್ಣ, ಹಿಂದೊಮ್ಮೆ ನಟಿಯೂ ಆಗಿದ್ದರು.
ಅಪರ್ಣ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇಂದು ಸಂಜೆ ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿರುವ ಅವರ ಮನೆಯಲ್ಲಿ ಅವರು ನಿಧನರಾಗಿದ್ದಾರೆ.
1984ರಲ್ಲಿ ಬಿಡುಗಡೆಯಾದ ‘ಮಸಣದ ಹೂ’ ಸಿನಿಮಾದಲ್ಲಿ ಅಪರ್ಣ ನಟಿಸಿದ್ದರು. ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಸಿನಿಮಾಗಿಂತಲೂ ನಿರೂಪಣೆಯಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಅವರ ಸ್ಪಷ್ಟ ಕನ್ನಡದ ನಿರೂಪಣಾ ಶೈಲಿ ಜನಪ್ರಿಯತೆ ಗಳಿಸಿತ್ತು.
90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದರು. ಭಾರತ ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರಮವನ್ನು ಎಂಟು ಗಂಟೆಗಳ ಕಾಲ ನಿರೂಪಿಸಿ ದಾಖಲೆ ಬರೆದಿದ್ದರು.
ನಮ್ಮ ಮೆಟ್ರೋ ಸೇರಿದಂತೆ ಅನೇಕ ಸರಕಾರಿ ಪ್ರಕಟಣೆಗಳಿಗೆ ಧ್ವನಿ ನೀಡಿದ್ದರು. 2013ರ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಹಾಸ್ಯ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು.
ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಮೂಲಕ ಓದುಗರಿಗೂ ಹತ್ತಿರವಾಗಿದ್ದರು. ಅವರ ತಂದೆಯೂ ಕನ್ನಡ ಪ್ರಭ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೊದಲ ಮದುವೆಯಿಂದ ವಿಚ್ಚೇದನ ಪಡೆದಿದ್ದ ಅಪರ್ಣ, ಖ್ಯಾತ ಲೇಖಕ ನಾಗರಾಜ ವಸ್ತಾರೆಯನ್ನು ವಿವಾಹವಾಗಿದ್ದರು.