ಮೂಡುಬಿದಿರೆ ಭಾರಿ ಗಾಳಿ ಮಳೆ – ಹಲವು ಮನೆಗಳಿಗೆ ಹಾನಿ – ಲಕ್ಷಾಂತರ ರೂಪಾಯಿ ನಷ್ಟ

ಮೂಡುಬಿದಿರೆ : ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆ, ಸ್ವರಾಜ್ಯಮೈದಾನ ಪರಿಸರ, ಮಾಸ್ತಿಕಟ್ಟೆ ಪ್ರದೇಶಗಳಲ್ಲಿ ಭಾನುವಾರ ಸಂಜೆ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ್ದು ಹಲವಾರು ಮನೆಗಳಿಗೆ ಹಾನಿಯಾಗಿದೆ. ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸ್ವರಾಜ್ಯ ಮೈದಾನದ ಬಳಿಯಿರುವ ಪತ್ರಕರ್ತ ಪುತ್ತಿಗೆಮನೆಯ ಧನಂಜಯ ಮೂಡುಬಿದಿರೆಯವರ ಮನೆಗೆ ಮರ ಉರುಳಿ ಬಿದ್ದಿದ್ದು ಅಪಾರ ಹಾನಿಯಾಗಿದೆ. ಇದೇ ಪರಿಸರದಲ್ಲಿರುವ ಪ್ರಶಾಂತ್, ತೇಜಸ್, ಮಹೇಶ್ ಎಂಬವರ ಮನೆಗೂ ತೀವ್ರ ಹಾನಿಯಾಗಿದೆ. ಈ ಪರಿಸರದಲ್ಲಿ ಹಲವು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮಹೇಶ್ ಎಂಬವರ ಮನೆಯ ಹಿಂಬದಿಯಲ್ಲಿದ್ದ ತೆಂಗಿನಮರವೊಂದು ಬುಡ ಸಮೇತ ತುಂಡರಿಸಿ ಸಮೀಪದ ಗದ್ದೆಗೆ ಹಾರಿದ್ದು ಘಟನೆಯ ತೀವ್ರತೆಗೆ ಸಾಕ್ಷಿಯಾಗಿದೆ. ಮಾಸ್ತಿಕಟ್ಟೆಯ ಅಚ್ಚಣ್ಣ ಎಂಬವರ ಮನೆಗೆ ಭಾರೀ ಹಾನಿಯಾಗಿದ್ದು ಸಮೀಪದ ಎರಡೂ ಮನೆಗಳ ಹಂಚುಗಳು ಹಾರಿಹೋಗಿವೆ. ಅಲ್ಲದೇ ಪೇಪರ್‌ಮಿಲ್ ಸನಿಹ ಟ್ರಾನ್ಸ್‌ಫಾರ್ಮರ್ ಡಿ.ಪಿ. ಉರುಳಿ ಬಿದ್ದಿದೆ. ಒಂಟಿಕಟ್ಟೆಯಲ್ಲಿ ಶುಭಕರ, ಪದ್ಮನಾಭ ಎಂಬವರ ಮನೆಗೂ ಹಾನಿಯಾಗಿದೆ. ಈ ಪರಿಸರದಲ್ಲೂ ಹಲವು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮಾಜಿ ಸಚಿವರ ಅಭಯಚಂದ್ರ ಜೈನ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಪುರಸಭಾ ಸದಸ್ಯರಾದ ಪ್ರಸಾದ್ ಕುಮಾರ್, ನಾಗರಾಜ್ ಪೂಜಾರಿ, ದಿವ್ಯಾ, ಕೊರಗಪ್ಪ ಹಾಗೂ ಕಂದಾಯ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳು ಉರುಳಿಬಿದ್ದ ಕಂಬಗಳನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ.

ADVRTISEMENT