ಮಂಗಳೂರು: ಹಳೆಯ ಸಿದ್ದರಾಮಯ್ಯ ಅವರ ಪಾತ ಕಳೆದುಹೋಗಿದೆ. ನಾನು ಅವರೊಂದಿಗೆ ಮಂತ್ರಿಯಾಗಿ ಮತ್ತು ಸಂಸದರಾಗಿ ಕಾರ್ಯ ನಿರ್ವಹಿಸಿದ್ದೇನೆ. ನಿಜವಾದ ಸತ್ಯವನ್ನು ಯಾರು ಮುಚ್ಚಿಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ತಮ್ಮ ತಿದ್ದಿಕೊಳ್ಳುವ ಮೂಲಕ ಹಳೆಯ ಸಿದ್ದರಾಮಯ್ಯ ಆಗುತ್ತಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ, ಪ್ಲಾಟ್‌ಫಾರ್ಮ್, ಆಹಾರ ವ್ಯವಸ್ಥೆ, ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
“ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆಯೋ, ಅದೇ ರೀತಿಯಾಗಿ ನಮ್ಮ ರೈಲ್ವೆ ಇಲಾಖೆಯಲ್ಲಿಯೂ ವಿಪತ್ತು ನಿರ್ವಹಣಾ ತಂಡ ಕಾರ್ಯನಿರ್ವಹಿಸುತ್ತವೆ. ಇದಕ್ಕಾಗಿ ವಾರ್ ರೂಮ್‌ಗಳನ್ನು ತೆರೆದಿದ್ದೇವೆ. ಪ್ರತಿಯೊಂದು ಸ್ಥಳದಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈ ಬಾರಿ ಅತೀ ಹೆಚ್ಚು ಮಳೆಯಾಗುತ್ತಿದೆ, ಜಿಲ್ಲಾಧಿಕಾರಿಗಳೊಂದಿಗೆ ನಮ್ಮ ಇಲಾಖೆ ಕೈಜೋಡಿಸಿದೆ,” ಎಂದು ಅವರು ಹೇಳಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.