ಮೂಡುಬಿದಿರೆ:ವಿವಿಧ ಜೀವಿಗಳು ವಿವಿಧ ರೀತಿಯಿಂದ ಬದುಕು ಕಟ್ಟಿಕೊಂಡಿವೆ. ಸಹಕಾರ ಕೇಂದ್ರಗಳು ಹಣದ ಭರವಸೆಯ ನಿಜ ಕೇಂದ್ರಗಳಾಗಿ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು.
ಮೂಡುಬಿದಿರೆ ಕೋ ಓಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ಇದರ 71 ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಕಲ್ಪವೃಕ್ಷ ಪ್ರಶಸ್ತಿ ಮತ್ತು ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ , ಸಪ್ತ ಸಂಧ್ಯಾ- ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ತನ್ನ ಉದ್ಧಾರ ತನ್ನಿಂದಲೇ ಎಂಬ ಸಹಕಾರದ ಧ್ಯೇಯದೊಂದಿಗೆ ಸಜ್ಜನಿಕೆಯ ಮಹಾಜನರು ಸಾಮರಸ್ಯದಿಂದ ಬೆಳೆಯಬಲ್ಲರು ಎಂದರು.
ಇದೇ ಸಂದರ್ಭದಲ್ಲಿ 53 ವರ್ಷಗಳಿಂದ ನಿರ್ದೇಶಕರಾಗಿ, ಅಧ್ಯಕ್ಷರು, ಉಪಾಧ್ಯಕ್ಷರು, ಇತ್ಯಾದಿ ಕಾರ್ಯವನ್ನು ನಿರ್ವಹಿಸಿ ಸೊಸೈಟಿಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ ಎಂ ಗಣೇಶ್ ನಾಯಕ್ ಅವರಿಗೆ ಆರತಿ ಬೆಳಗಿ, ಚಿನ್ನದ ಪದಕ, ಬೆಳ್ಳಿಯ ಫಲಕ ದೊಂದಿಗೆ ಸಹಕಾರ ಕಲ್ಪವೃಕ್ಷ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಎಂ ಸಿ ಎಸ್ ಸೊಸೈಟಿಯ ವಿಶೇಷ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಚಂದ್ರಶೇಖರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಲ್ಕು ದೇವಾಲಯಗಳಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ, ಮಂಗಳೂರು ಡಿ ಆರ್ ಪಿ ಎಸ್ ನ ಡಾ. ರಮೇಶ್, ಜಯಶ್ರೀ ಅಮರನಾಥ ಶೆಟ್ಟಿ ಹಾಜರಿದ್ದರು. ಸೊಸೈಟಿಯ ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಕುಮಾರಿ ಶಾರ್ವರಿ ಪಿ ದೇವಾಡಿಗ ರಿಂದ ವಾದ್ಯ ನೀನಾದ, ಯಕ್ಷನಿಧಿ ಇವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.














