ಆಳ್ವಾಸ್ (ಸ್ವಾಯತ್ತ) ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಮೂಡುಬಿದಿರೆ: ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ, ನಾಗರಿಕತೆ, ಸಂಸ್ಕೃತಿಯಲ್ಲಿದೆ. ನಮ್ಮದು ಅಪ್ಪಟ ದೇಶೀಯ, ಅಸಮಾನತೆ ನಿರ್ಮೂಲನೆಯ ಪರಿವರ್ತನಾಶೀಲ ಸಂವಿಧಾನ ಎಂದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕಾನೂನು ಪೀಠದ ಪ್ರಾಧ್ಯಾಪಕ ಡಾ. ಪಿ. ಪುನೀತ್ ಹೇಳಿದರು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಮಾನವಿಕ ವಿಭಾಗಗಳು ಹಮ್ಮಿಕೊಂಡ `ರಾಷ್ಟ್ರೀಯ ಸಂವಿಧಾನ ದಿನ’ ಆಚರಣೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ಕುರಿತು ಅದರ ರಚನೆ ಸಂದರ್ಭದಲ್ಲಿಯೇ ಆರೋಪಗಳು ಬಂದಿದ್ದವು. ಆದರೆ, ಅದಕ್ಕೆ ರಚನಾ ಸಮಿತಿ ವಿಸ್ತೃತವಾಗಿ ಉತ್ತರಿಸಿತ್ತು ಎಂದರು.
ಸಂವಿಧಾನ ರಚನಾ ಸಮಿತಿಯಲ್ಲಿ ನಡೆದ ಚರ್ಚೆಯು ದೇಶದಲ್ಲಿ ನಡೆದ ಅತ್ಯುತ್ತಮ ಚರ್ಚೆ ಎಂದು ವಿವರಿಸಿದರು.
ಸಂವಿಧಾನಗಳ ಸರಾಸರಿ ಜೀವಿತಾವಧಿ 17 ವರ್ಷವಾಗಿದೆ. ಆದರೆ, 76ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಭಾರತದ ಸಂವಿಧಾನ ಜಗತ್ತಿನ ಅತಿದೊಡ್ಡ ಮಾತ್ರವಲ್ಲ ಅತ್ಯುತ್ತಮ ಸಂವಿಧಾನ. 106 ತಿದ್ದುಪಡಿ ಆಗಿದ್ದರೂ ಸ್ಥಿರವಾಗಿದೆ ಎಂದು ತಿಳಿಸಿದರು.
ಸಂವಿಧಾನ 50 ವರ್ಷ ಬದುಕಿದರೆ, ಅದರ ಭವಿಷ್ಯ ಉತ್ತಮವಾಗಿರುತ್ತದೆ. ಅದು ಸ್ಪಟಿಕೀಕರಣಗೊಂಡು ಸದೃಢವಾಗುತ್ತದೆ ಎಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಮ್ಮ ಆಲೋಚನಾ ಕ್ರಮ ಬದಲಾಗಬೇಕಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗವನ್ನು ಸಮಾನಂತರವಾಗಿ ಕಾಣಬೇಕು ಎಂದರು.
ಪ್ರಸ್ತುತ ಸಮಾಜದಲ್ಲಿ ಔದ್ಯೋಗಿಕ ಕೊರತೆಗಿಂತ ಹೆಚ್ಚಾಗಿ, ಬೇಡಿಕೆ ಅನುಗುಣವಾಗಿ ವಿಷಯ ಆಯ್ಕೆಯ ಸಮತೋಲನ ಆಗುತ್ತಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಜ್ಞಾನ ತುಂಬಿದ ಡಬ್ಬಗಳು ತೆರೆದುಕೊಳ್ಳಬೇಕು. ಸೀಮಿತ ದೃಷ್ಟಿಕೋನ ಬಿಟ್ಟು, ಅಂತರಶಿಸ್ತೀಯ ಅಧ್ಯಯನ ನಡೆಸಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಮಾನವೀಯತೆಯ ಅತ್ಯುತ್ತಮ ಮೌಲ್ಯಗಳನ್ನು ಹೊಂದಿದ ಸಂವಿಧಾನ ನಮ್ಮದು. ದಾಸ್ಯ, ಶೋಷಣೆ ಮುಕ್ತ ಸಮಾಜ ನೀಡಿದೆ ಎಂದರು. ಅಂದು, ಸತಿ ಪದ್ಧತಿ ಪರವಾಗಿಯೂ ಹೋರಾಡಿದ ಜನ ನಮ್ಮ ದೇಶದಲ್ಲಿ ಇದ್ದರು. ಆದರೆ, ಜನರ ಇಚ್ಛೆಯೇ ಜನರನ್ನು ಆಳಬೇಕು ಎಂದ ಅವರು ಗಿಡ ನೆಟ್ಟು ಬೆಳೆಸಿದವರಿಗೆ ಫಲ ದೊರೆಯಬೇಕು. ವೈಚಾರಿಕತೆ ಇದ್ದ ಸಮಾಜ ಮಾತ್ರ ಜನರನ್ನು ಬದುಕಲು ಬಿಡುತ್ತದೆ. ಇಲ್ಲದಿದ್ದರೆ ಅವಸಾನ ಸಹಜವೆಂದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಡಿ, ಕುಲಸಚಿವ (ಶೈಕ್ಷಣಿಕ) ಡಾ.ಟಿ.ಕೆ.ರವೀಂದ್ರನ್ ಇದ್ದರು. ವಿದ್ಯಾರ್ಥಿನಿ ಅನುಷಾ ಮತ್ತು ಶ್ರೀವಲ್ಲಿ ಕಾರ್ಯಕ್ರಮ ನಿರೂಪಿಸಿದರು. ದಿಶಾ ಸ್ವಾಗತಿಸಿದರು. ರಕ್ಷಾ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.ತೇಜಸ್ವಿನಿ ವಂದಿಸಿದರು.

ADVRTISEMENT