ಪುತ್ತೆ ಸೋಮನಾಥೇಶ್ವರ ದೇಗುಲಕ್ಕೆ  ಭಕ್ತರ ಭಕ್ತಿಯ ಹೊರೆಕಾಣಿಕೆ ಮೆರವಣಿಗೆ

ಮೂಡುಬಿದಿರೆ : ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕದಂಗವಾಗಿ ವೈಭವದ ಹೊರೆಕಾಣಿಕೆ ಮೆರವಣಿಗೆಯು ಶುಕ್ರವಾರ ನಡೆಯಿತು.
ಅನುವಂಶೀಯ ಆಡಳಿತ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ ಎಂ. ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಅರಮನೆಯ ಅಂಗಣದಲ್ಲಿ ಎಡಪದವು ಮುರಳೀಧರ ತಂತ್ರಿಗಳು ಹಾಗೂ ಬಸದಿಗಳ ಇಂದ್ರರು ಪ್ರಾರ್ಥನೆ ನೆರವೇರಿಸಿ ದೀಪ ಪ್ರಜ್ವಲಿಸಿದರು.
ಚೌಟರ ಅರಮನೆಗೆ ಸಂಬಂದಪಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಗೈದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮತ್ತಿತರರು ಹಸಿರು ನಿಶಾನೆ ತೋರುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಅರಮನೆಯಿಂದ ವೆಂಕಟರಮಣ ದೇವಸ್ಥಾನ, ಹನುಮಂತ ದೇವಸ್ಥಾನದ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಸ್ವರಾಜ್ಯ ಮೈದಾನ, ಒಂಟಿಕಟ್ಟೆಯ ಮೂಲಕ ಕ್ಷೇತ್ರಕ್ಕೆ ಸಾಗಿ ಬಂತು. ಕಲಶ ಹೊತ್ತ ಮಹಿಳೆಯರು, ಕುಣಿತ ಭಜನಾ ತಂಡ, ಕೊಂಬು, ಚೆಂಡೆಯ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಸೋಮಾನಾಥೇಶ್ವರ, ಮಹಿಷಮರ್ಧಿನಿ, ಗಣಪತಿ ಗುಡಿಗಳ ಸುವರ್ಣ ಕಲಶಗಳು ಹಾಗೂ ದೈವದ ಮಂಚವನ್ನು ಅಲಂಕೃತ ವಾಹನಗಳಲ್ಲಿ ತರಲಾಯಿತು.
ಅಕ್ಕಿ, ತೆಂಗಿನಕಾಯಿ, ತರಕಾರಿ, ಧವಸಧಾನ್ಯಗಳನ್ನು ಹೊತ್ತ ನೂರಾರು ವಾಹನಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್, ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಚೌಟರ ಅರಮನೆಯ ವೀರೇಂದ್ರ ಎಂ, ಪದಾಧಿಕಾರಿಗಳಾದ ಅಮರಶ್ರೀ ಅಮರನಾಥ ಶೆಟ್ಟಿ, ನೀಲೇಶ್ ಶೆಟ್ಟಿ, ಶಿವಪ್ರಸಾದ್ ಆಚಾರ್ಯ, ಅಡಿಗಳ್ ಪಿ. ಅನಂತಕೃಷ್ಣ ಭಟ್, ಎಚ್ ಧನಕೀರ್ತಿ ಬಲಿಪ, ಶ್ರೀಕಾಂತ್ ರಾವ್, ಕೆ. ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ವಾದಿರಾಜ ಮಡ್ಮಣ್ಣಾಯ, ಜಿ ಉಮೇಶ ಪೈ, ರೋಟರಿ ಕ್ಲಬ್ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ರೋಟರಿ ಟೆಂಪಲ್‌ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಉದ್ಯಮಿಗಳಾದ ರಾಜೇಂದ್ರ ಕುಮಾರ್ ಜೈನ್, ಮಿಥುನ್ ಚೌಟರ್, ಮಹೇಂದ್ರವರ್ಮ ಜೈನ್ ಮತ್ತಿತರರು ಗಣ್ಯರು ಪಾಲ್ಗೊಂಡರು.

ADVRTISEMENT

Leave a Reply

Your email address will not be published. Required fields are marked *