ಬಂಟ್ವಾಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ ಜಿಲ್ಲಾ ಮಟ್ಟದ ಭಜನಾ ಪರಿಷತ್ ಸಭೆಯು ಬುಧವಾರ ಬಂಟ್ವಾಳ ಯೋಜನಾ ಕಚೇರಿಯ ಸಭಾಂಗಣದಲ್ಲಿ, ನಡೆಯಿತು.
ಭಜನ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಭಜನಾ ಮಂಡಳಿ ಹಾಗೂ ಮಂದಿರಗಳ ರಿಜಿಸ್ಟ್ರೇಷನ್ ಮುಂತಾದ ದಾಖಲಾತಿಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದ ಅವರು ಭಜನಾ ಪರಿಷತ್ತು ನಗರ ಭಜನೆ,ಮನೆ ಮನ ಭಜನೆ, ಸಂಧ್ಯಾ ಭಜನೆ ಮುಖಾಂತರವಾಗಿ ನಿರಂತರ ಚಟುವಟಿಕೆಗಳಿಂದ ಕೂಡಿರಬೇಕು ಎಂದರು.
ರಾಜ್ಯ ಭಜನಾ ಪರಿಷತ್ತಿನ ಸಂಚಾಲಕರಾದ ಜಿ. ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಭಜನಾ ಮಂಡಳಿಗಳ ಹಾಗೂ ಮಂದಿರಗಳ ಪ್ರಾಥಮಿಕ ಅವಶ್ಯಕತೆಗಳಿಗೆ ಅನುಗುಣವಾಗಿ ವಲಯ ಭಜನಾ ಪರಿಷತ್ತ್ ಸಂಯೋಜಕರು ಸ್ಪಂದಿಸಬೇಕೆಂದ ಅವರು
ಶ್ರೀ ಕ್ಷೇತ್ರದಿಂದ ಹಾಗೂ ಸರಕಾರದಿಂದ ಸಿಗುವ ಅನುದಾನಗಳ ಒದಗಣೆಗೆ ಪೂರಕವಾಗುವಂತೆ ಹಾಗೂ ಭಜನಾ ಮಂಡಳಿಗಳ ಸದೃಢತೆಗೆ ಬೇಕಾಗಿ ಸಮನ್ವಯಾಧಿಕಾರಿಗಳನ್ನು ನೇಮಕ ಮಾಡಿದ್ದು ಭಜನಾ ಪರಿಷತ್ ಪದಾಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪೂಜ್ಯರ ಆಶಯದಂತೆ ಭಜನಾ ತರಬೇತಿ ಕಮ್ಮಟದ ಮುಖಾಂತರ ಪ್ರತಿ ವರ್ಷ ನೂರಾರು ಮಂದಿ. ತರಬೇತಿ ಪಡೆದುಕೊಳ್ಳುತ್ತಿದ್ದು ಗ್ರಾಮ ಮಟ್ಟದಲ್ಲಿ ಭಜನಾ ಮಂಡಳಿಗಳನ್ನು ಕಟ್ಟಿ ಬೆಳೆಸುತ್ತಿದ್ದಾರೆ ಎಂದು ತಿಳಿಸಿದರು.
ನಿಸ್ವಾರ್ಥವಾಗಿ ಸೇವೆಗೆಯುತ್ತಿರುವ ತಾಲೂಕು ಹಾಗೂ ವಲಯ ಭಜನ ಪರಿಷತ್ತಿನ ಪದಾಧಿಕಾರಿಗಳ ಶ್ರಮವನ್ನು ವಿಶೇಷವಾಗಿ ಗೌರವಿಸಿದರು.
ಪ್ರತಿಯೊಂದು ಗ್ರಾಮದಲ್ಲಿಯೂ ನಗರ ಭಜನೆಯ ಮುಖಾಂತರ ಸಂಘಟನಾತ್ಮಕವಾಗಿ ಭಜನಾ ಮಂಡಳಿಗಳನ್ನು ಬೆಳೆಸಬೇಕು ಹಾಗೂ ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳಿಗೆ ಭಜನಾ ತರಬೇತಿಯನ್ನು ಆಯೋಜಿಸುವುದು ಮತ್ತು ಕಡಿಮೆ ಖರ್ಚಿನಲ್ಲಿ ಮನೆ ಮನೆ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಉತ್ತಮ ರೀತಿಯ ಪರಿವರ್ತನೆ ಸಾಧ್ಯ ಎಂದರು.
ಮಂಗಳೂರು,ಮೂಡುಬಿದಿರೆ, ಕಡಬ,ಕಾಸರಗೋಡು, ಮಂಜೇಶ್ವರ, ಪುತ್ತೂರು, ವಿಟ್ಲ, ಬಂಟ್ವಾಳ, ಸುಳ್ಯ, ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರುಗಳು ತಮ್ಮ ತಾಲೂಕಿನ ಪರಿಷತ್ ಸಾಧನೆಯ ವರದಿ ಹಾಗೂ ಅನಿಸಿಕೆಗಳನ್ನು ಮಂಡಿಸಿದರು.
ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಮಾತನಾಡಿ, ಹಿಂದೂ ಸಮಾಜವನ್ನು ಒಂದೇ ಸೂರಿನಡಿ ಸೇರಿಸಲು ಹಾಗೂ ಸನಾತನ ಪರಂಪರೆಯ ನಂಬಿಕೆ ಉಳಿಸಿ ಬೆಳೆಸಲು ಮಾತ್ರವಲ್ಲದೆ ದೇವರನ್ನು ಅತ್ಯಂತ ಸಮೀಪದಲ್ಲಿ ಕಾಣಲು ಭಜನೆ ಒಂದು ಮಾಧ್ಯಮವಾಗಿದೆ. ಪೂಜ್ಯರ ಕನಸಿನಂತೆ ಭಜನಾ ಪರಿಷತ್ತಿನ ಮುಖಾಂತರವಾಗಿ ನಾಡಿನದ್ಯಂತ ಭಜನಾ ಮಂದಿರ ಹಾಗೂ ಮಂಡಳಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.ಇದು ಉತ್ತಮ ಬೆಳವಣಿಗೆ ಎಂದರು.
ಧರ್ಮಸ್ಥಳ ರಾಜ್ಯ ಭಜನಾ ಪರಿಷತ್
ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು. ಬಂಟ್ವಾಳ ನಿಕಟ ಪೂರ್ವ ಅಧ್ಯಕ್ಷ ದಿನೇಶ್ ಮಾಮೇಶ್ವರ ನಿಕಟ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ ಜಯನಂದ ಸ್ವಾಗತಿಸಿ, ಶಶಿಕಲಾ ಕೊಯ್ಲ ರವರು ಪ್ರಾರ್ಥಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Leave a Reply