ದಸ್ಕತ್ ಸಿನಿಮಾದಲ್ಲಿ ಶೇಖರನ ಪಾತ್ರಕ್ಕೆ ಜೀವ ತುಂಬಿದ ದೀಕ್ಷಿತ್ ಅಂಡಿಂಜೆ

ಸದ್ಯಕ್ಕೆ ತುಳುನಾಡಿನಾದ್ಯಂತ ಬರೀ ಸದ್ದು ಮಾಡುತ್ತಿರುವ ದಸ್ಕತ್ ಸಿನಿಮಾ ಎಲ್ಲಾರ ಮನೆಮನದಲ್ಲಿ ಗುನುಗುಟ್ಟುತ್ತಿದೆ. ವಿಭಿನ್ನ ಕಥೆ, ಛಾಯಾಗ್ರಹಣ, ಸಂಗೀತ ನಟನೆಯನ್ನು ಹೊಂದಿರುವ ನೈಜ್ಯ ಶೈಲಿಯಲ್ಲಿ ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಅತ್ಯದ್ಭುತವಾಗಿ ಕಂಡು ಬರುವ ಪಾತ್ರ ಶೇಖರ ಎಂಬ ಕಟ್ಟುಮಸ್ತು ದೇಹ ಹೊಂದಿರುವ ಯುವಕನ ಪಾತ್ರ. ಈ ಪಾತ್ರ ಸಿನಿಪ್ರಿಯರ ಗಮನ ಸೆಳೆದಿರುವುದು ಸುಳ್ಳಾಲ್ಲ. ಆ ಪಾತ್ರಕ್ಕೆ ಜೀವ ತುಂಬಿದವರು ಒಂದು ಹಳ್ಳಿ ಪ್ರತಿಭೆ ದೀಕ್ಷಿತ್ ಅಂಡಿಂಜೆ. ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯ ದಿ|ಸಂಜೀವ ಪೂಜಾರಿ ಹಾಗೂ ಪುಷ್ಪ ದಂಪತಿಯ ಪುತ್ರ. ಮೂವರು ಮಕ್ಕಳಲ್ಲಿ ಇವರು ಮೊದಲಿಗರು. ಶುಭಶ್ರೀ ಹಾಗೂ ದೀಪ್ತಿ ಎಂಬ ಸಹೋದರಿಯರನ್ನು ಹೊಂದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಅಂಡಿಂಜೆಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣಕ್ಕೆ ಕೊಕ್ರಾಡಿಯಲ್ಲಿ ಸೇರಿ ೯ ನೇ ತರಗತಿಯಲ್ಲಿ ಗಣಿತ ವಿಭಾಗದಲ್ಲಿ ಫೇಲ್ ಆದ ದೀಕ್ಷಿತ್ ಅವರು ಒಂದು ವರ್ಷಗಳ ಕಾಲ ಮಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡು ಸಂತ ಅಲೋಷಿಯಸ್ ನಲ್ಲಿ ರಾತ್ರಿ ಕಾಲೇಜು ಸೇರಿ ಹೈಸ್ಕೂಲ್, ಪಿಯುಸಿ ಶಿಕ್ಷಣವನ್ನು ಕಂಪ್ಲೀಟ್ ಮಾಡ್ತಾರೆ. ನಂತರ ಜೂಯಿಸ್ ಫಿಟ್ನೆಸ್ ಎಂಬಲ್ಲಿ ಜಿಮ್ ಕೆಲಸಕ್ಕೆ ಸೇರಿಕೊಂಡು ನಂತರದ ದಿನಗಳಲ್ಲಿ ವಿ.ಜೆ ದೇವು ಅವರ ಮೂಕಾಂಬಿಕಾ ಚೆಂಡೆಗೆ ಸೇರಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಹಂತ ಹಂತವಾಗಿ ಕಾರ್ಯಕ್ರಮಗಳಿಗೆ ಓಡಾಡಿ ನಿರೂಪಣೆಯನ್ನು ಹವ್ಯಾಸವನ್ನಾಗಿಸಿಕೊಂಡು, ಯಾವುದೇ ಕಾರ್ಯಕ್ರಮಗಳಲ್ಲೂ ಅದ್ಭುತವಾಗಿ ನಿರೂಪಣೆಯನ್ನು ಮಾಡಿ ಜನರಿಂದ ಮೆಚ್ಚು ಗಳಿಸಿದರು.  ಶಾಲೆ ಸರಿಯಾಗಿ ಹೋಗಿಲ್ಲದಿದ್ದರೂ ಬದುಕಿನಲ್ಲಿ ತಾನು ಏನಾದರೂ ಸಾಧಿಸಬೇಕೆಂಬ ಛಲವನ್ನು ಹೊಂದಿದ್ದ ದೀಕ್ಷಿತ್ ಪ್ರತಿಯೊಂದು ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡರು.
ಸಿನಿಪ್ರಿಯರು ಹೇಳುವಂತೆ ಸಿನಿಮಾದಲ್ಲಿ ದೀಕ್ಷಿತ್ ಅವರ ಪಾತ್ರವೇ ಸಂಪೂರ್ಣ ಭಿನ್ನವಾಗಿದ್ದು, ಇವರೇ ಶೇಖರನ ಪಾತ್ರಧಾರಿಯೇ ಎಂದು ಸಿನಿ ಪ್ರೇಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ.

ದಸ್ಕತ್ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೊರಬರುವ ಸಮಯದಲ್ಲಿ ಶೇಖರ ಪಾತ್ರಧಾರಿ ಯಾರೆಂದು ಹುಡುಕಾಟದಲ್ಲಿರುವಾಗ ಸ್ವತಃ ದೀಕ್ಷಿತ್ ಅವರೇ ಎದುರು ಬಂದು ತಾನು ಆ ಪಾತ್ರಧಾರಿ ಎಂದು ಹೇಳಿದರೂ ಜನರು ನಂಬಲು ತಯಾರಿಲ್ಲ ಆ ರೀತಿಯಲ್ಲಿ ಸಂಪೂರ್ಣ ವಿಭಿನ್ನ ಲುಕ್‌ನೊಂದಿಗೆ ಶೇಖರ ಪಾತ್ರಕ್ಕೆ ಜೀವ ತುಂಬಿದ್ದಾರೆ.
“ಶೇಖರ” ಪಾತ್ರದ ತಯಾರಿಗಾಗಿ ದೀಕ್ಷಿತ್ ಅಂಡಿಂಜೆಯವರು ಬಹಳಷ್ಟು ಶ್ರಮ ಪಟ್ಟಿರುವುದು ತೆರೆಯ ಮೇಲೆ ಕಾಣಿಸುತ್ತದೆ. ಶೇಖರನ ಪಾತ್ರಕ್ಕೆ ಬೇಕಾದಂತೆ ಸ್ವಲ್ಪ ಮೈಬಣ್ಣ ಕಪ್ಪಾಗಿಸಲು ಚಿತ್ರೀಕರಣ ಆರಂಭಕ್ಕೂ ಮೊದಲೇ ಸುಮಾರು ಎರಡು ತಿಂಗಳುಗಳ ಕಾಲ ಬಿಸಿಲಿನಲ್ಲಿ ಮಲಗಿ ಮೈಬಣ್ಣ ಕಪ್ಪಾಗಿಸಿ, ತೂಕ ಹೆಚ್ಚಿಸಿ, ಗಡ್ಡ ಬೋಳಿಸಿ ಪಾತ್ರಕ್ಕೆ ಬೇಕಾದಂತೆ ಜೀವನಶೈಲಿ- ಮಾತಿನ ಶೈಲಿ ಬದಲಾಯಿಸಿಕೊಂಡು, ಎಲೆ ಅಡಿಕೆ ತಿನ್ನಲು ಆರಂಭಿಸಿ ಹಲ್ಲಿನ ಬಣ್ಣವನ್ನು ಕೆಂಪಗಾಗಿಸಿ ಸಂಪೂರ್ಣವಾಗಿ ತಮ್ಮನ್ನು ತಾವು ಶೇಖರನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂತಹ ತಯಾರಿಗಳೇ ಒಬ್ಬ ನಾಯಕ ನಟನಿಗೆ ಬೇಕಾಗಿರುವ ಅರ್ಹತೆ. ಶ್ರಮಪಟ್ಟು ದೇಹ ದಂಡಿಸಿ, ಸಿನಿಮಾಗಾಗಿ ಸುಮಾರು ಆರು ತಿಂಗಳುಗಳ ಕಾಲ ತಮ್ಮನ್ನು ತಾವು ಶೇಖರನ ಪಾತ್ರಕ್ಕೆ ಪ್ರವೇಶಿಸಿ ಒಂದೊಳ್ಳೆ ದಸ್ಕತ್ ಸಿನಿಮಾದ ಔಟ್‌ಪುಟ್ ಬರಲು ಶ್ರಮಿಸಿದ್ದಾರೆ. ಶೇಖರನ ಪಾತ್ರ ನಮ್ಮೊಳಗಿನ ಪ್ರತಿರೋಧದ ದನಿಯಂತೆ. ಆ ದನಿಗೆ ದೀಕ್ಷಿತ್ ತೆರೆಯ ಮೇಲೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಿದ್ದಾರೆ. ದೀಕ್ಷಿತ್ ಅಂಡಿಂಜೆಯವರು ಚಿತ್ರರಂಗಕ್ಕೆ ಹೊಸ ಭರವಸೆಯ ನಾಯಕ ನಟನಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ. ತಮಗೆ ಸಿಕ್ಕ ಅವಕಾಶಕ್ಕೆ ಪ್ರೇಕ್ಷಕಾಭಿಮಾನಿಗಳಿಗೆ ನಿರಾಸೆ ಬಾರದಂತೆ ನಟಿಸಿ ಪ್ರೇಕ್ಷಕರ ಬಾಯಲ್ಲಿ ಸೈ ಅನಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಹಿರಿಯ ಕಲಾವಿದರು, ವಿದೇಶಿಗರು ದಸ್ಕತ್ ಸಿನಿಮಾ ನೋಡಿ, ಶೇಖರ ಪಾತ್ರಧಾರಿ ದೀಕ್ಷಿತ್ ಅಂಡಿಂಜೆಯವರ ನಟನೆಗೆ ಶಹಭಾಷ್‌ಗಿರಿ ತಿಳಿಸಿದ್ದಾರೆ. ಇವರಿಗೆ ಇನ್ನೂ ತುಳು ಸಿನಿಮಾ ಮಾತ್ರವಲ್ಲದೇ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಅವಕಾಶ ಒದಗಿ ಬರಲೆಂದು ಆಶಿಸೋಣ. ಹಳ್ಳಿ ಪ್ರತಿಭೆ ದಿಲ್ಲಿಯೆತ್ತರಕ್ಕೂ ಬೆಳೆಯಲಿ.

ADVRTISEMENT

Leave a Reply

Your email address will not be published. Required fields are marked *