ರಣ ಮಳೆಗೆ ಅಲಂಗಾರು ವ್ಯಾಪ್ತಿ ಬಳಿ ಹೆದ್ದಾರಿ ಕಾಮಗಾರಿಗಳು ಸಂಪೂರ್ಣ ಕೆಸರುಮಯ- ವಾಹನ ,ಜನ ಓಡಾಟಕ್ಕೆ ತೊಂದರೆ


ಮೂಡುಬಿದಿರೆ: ಕಳೆದ ಒಂದು ವಾರದಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಮೂಡುಬಿದಿರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವಲ್ಲಿ ಮಣ್ಣು ಕರಗಿ ತಗ್ಗು ಪ್ರದೇಶದತ್ತ ಹರಿದು ದಿನ ನಿತ್ಯ ಓಡಾಡುವ ರಸ್ತೆಗಳೆಲ್ಲಾ ಕೆಸರುಗದ್ದೆಗಳಾಗಿ ಬಿಟ್ಟಿವೆ. ಜನ, ವಾಹನಗಳ ಓಡಾಟಕ್ಕೆ ತೊಂದರೆಯುಂಟಾಗಿದೆ.
ಅಲಂಗಾರು ಪರಿಸರದಲ್ಲಿ ವಿಶೇಷವಾಗಿ ಕಾನ, ಪೊಯ್ಯದದಲ್ಯ ಅಂಬೂರಿ ಮೊದಲಾದ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿ ಮಳೆಗಾಲದ ಆರಂಭಕ್ಕೂ ಮುನ್ನ ಮಳೆಗಾಲದ ಸಂಭಾವ್ಯ ಆಪಾಯ, ತೊಂದರೆಗಳ ಬಗ್ಗೆ ಗುತ್ತಿಗೆದಾರರು ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಾರಣ ಸಮಸ್ಯೆ ಬಿಗಡಾಯಿಸಿದೆ.
ಹೆದ್ದಾರಿ ನಿರ್ಮಾಣವಾಗುವ ಹಂತದಲ್ಲಿ ಈ ಭಾಗದ ನಡುವೆ ಮಣ್ಣು ಸೇರಿಸುವ ಕಾಮಗಾರಿ ನಡೆದಿತ್ತು. ಆಗ ಜನರೆಲ್ಲ ಇಲ್ಲೊಂದು ಅಂಡರ್ ಪಾಸ್ ನಿರ್ಮಾಣಕ್ಕಾಗಿ ಆಗ್ರಹಿಸಿ ಹೋರಾಟ ನಡೆಸಿದ್ದರು. ಅಂತೆಯೇ ಅಂಡರ್ ಪಾಸ್ ನಿರ್ಮಾಣವಾಗುವ ಬಗ್ಗೆ ಭರವಸೆ ಲಭಿಸಿತ್ತು. ಆದರೆ, ಇನ್ನೂ ಅಂಡರ್ ಪಾಸ್ ಕಾಮಗಾರಿ ನಡೆದಿಲ್ಲ. ರಾಶಿ ಹಾಕಿದ ಮಣ್ಣಿನ ಬದಿಗೆ ತಡೆಗೋಡೆ ಸಮರ್ಪಕವಾಗಿ ನಿರ್ಮಿಸಿಲ್ಲ ಹಾಗಾಗಿ ಮಣ್ಣು ಕರಗಿ ನೀರಿನೊಂದಿಗೆ ಮೊದಲು ಇದ್ದ ಮಾರ್ಗಗಳತ್ತ ಹರಿದು ಬರತೊಡಗಿದೆ. ಗ್ರಾಮೀಣ ರಸ್ತೆಗಳೆಲ್ಲ ಕೆಸರುಮಯವಾಗಿಬಿಟ್ಟಿದೆ.
ಗ್ರಾಮಗಳಿಂದ ಪೇಟೆಯತ್ತ ಬರುವವರಿಗೆ ನಡೆದುಕೊಂಡು ಇಲ್ಲವೇ ವಾಹನಗಳಲ್ಲಿ ಬರಲು ತೀರಾ ಸಮಸ್ಯೆಯಾಗುತ್ತಿದೆ. ಶನಿವಾರ ಸ್ಥಳೀಯರೋರ್ವರ ಕಾರು ಕೆಸರಲ್ಲಿ ಹೂತು ಹೋಗಿ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆ ಎತ್ತಲಾಗಿದೆ ಎಂದು ಊರವರು ತಿಳಿಸಿದ್ದಾರೆ.
ಸ್ಥಳೀಯರಾದ ಡೆನಿಸ್ ಪಿರೇರಾ ಇವರು ಗುತ್ತಿಗೆದಾರರ ಗಮನ ಸೆಳೆದಿದ್ದು ರವಿವಾರ ಗುತ್ತಿಗೆದಾರರರು ಜೆಸಿಬಿ ಕಳುಹಿಸಿದ್ದಾರೆ. ಕೆಸರು ನೀರಿನ ಹರಿವಿಗೆ ಅವಕಾಶ ಮಾಡಿಕೊಡುವ ಕಾರ್ಯ. ಆರಂಭವಾಗಿದೆ. ಆದರೆ, ಇದು ಕೆಲವು ದಿನಗಳ ಸಮಸ್ಯೆಯಾಗಿ ಉಳಿಯುವುದಿಲ್ಲ. ಇಡೀ ಮಳೆಗಾಲದಲ್ಲಿ ಈ ಸಮಸ್ಯೆ ಜೀವಂತವಾಗಿ ಉಳಿಯಲಿದೆ. ಇದಕ್ಕೆ ಕೂಡಲೇ ಶಾಶ್ವತ ಪರಿಹಾರ ಕಾಮಗಾರಿ ನಡೆಸಬೇಕಾದ ಅಗತ್ಯವಿದೆ.

ADVRTISEMENT