ಮೂಡುಬಿದಿರೆ: ವೇದಗಳಲ್ಲಿ ಎಲ್ಲಿಯೂ ಜಾತಿ ವ್ಯವಸ್ಥೆಯೆಂಬುದಿರಲಿಲ್ಲ. ವೇದಗಳಲ್ಲಿ ಇದದ್ದು ವರ್ಣ ವ್ಯವಸ್ಥೆ ಮಾತ್ರ. ಹಾಗಾಗಿ ಜಾತಿ ವ್ಯವಸ್ಥೆ ನಮಗೆ ಬೇಡ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಅಂತಹ ಭಾವನೆ ನಮ್ಮಲ್ಲಿ ಬಾರದೇ ಹೋದರೆ ದೇಶಕ್ಕೂ ಅಪಾಯ ಧರ್ಮಕ್ಕೂ ಅಪಾಯವಿದೆ ಎಂದು ಖ್ಯಾತ ಯುವ ವಕೀಲ ಶರತ್ ಶೆಟ್ಟಿ ತಿಳಿಸಿದರು.
ಅವರು ಶನಿವಾರ ದರೆಗುಡ್ಡೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ ೧೩ನೇ ವಾರ್ಷಿಕೋತ್ಸವದ ಪ್ರಯುಕ್ತ ಶನೀಶ್ಚರ ಪೂಜೆ, ಧಾರ್ಮಿಕ ಸಭೆ, ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘವನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಆದರೆ ಆ ಸಂಘ ಕಟ್ಟಿದ ನಂತರ ಜನರ ಕಷ್ಟಗಳಿಗೆ ಸ್ಪಂದಿಸಿರುವುದು ನಿಜವಾಗಲೂ ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ ಕರಾವಳಿ ಕೇಸರಿ ಮಹಿಳಾ ಘಟಕದ ಈ ಕಾರ್ಯ ಶ್ಲಾಘನೀಯ ಎಂದರು.
ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಮಾತನಾಡಿ, ಹಿಂದೂ ಸಂಘಟನೆಯ ಯುವಕರು ತಮ್ಮ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ, ಸಮಾಜಕ್ಕೆ ಕಷ್ಟ ಎದುರಾದಗ ಸಮಾಜದ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸಿ, ಸಮಾಜದಲ್ಲಾಗುವ ಆನ್ಯಾಯಗಳ ವಿರುದ್ಧ ಎದೆಯೊಡ್ಡಿ ನಿಲ್ಲುವ ಕೆಲಸವನ್ನು ಜಾಗರಣ ವೇದಿಕೆ, ಕರಾವಳಿ ಕೇಸರಿಯಂತಹ ಸಂಘಟನೆಯ ಯುವಕರು ಮಾಡುತ್ತಾ ಬಂದಿದ್ದಾರೆ ಎಂದ ಕೋಟ್ಯಾನ್, ಅಷ್ಟು ಮಾತ್ರವಲ್ಲದೇ ಗೋಮಾತೆಯನ್ನು ರಕ್ಷಿಸುವಲ್ಲಿಯೂ ಸಂಘಟನೆಯ ಯುವಕರು ತಮ್ಮನ್ನು ತಾವು ಹಗಲಿರುಳೆನ್ನದೇ ತೊಡಗಿಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಸಂಘಟನೆಯಿಂದಾಗಿ ಹಿಂದೂ ಧರ್ಮ ಇನ್ನಷ್ಟು ಪ್ರಬಲವಾಗಿ ನಿಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜಮುಖಿ ಸೇವೆಗೈದ ಮುಂಬೈ ಉದ್ಯಮಿ ನಾರಾಯಣ ಕೆ. ಶೆಟ್ಟಿ ಅವರಿಗೆ ‘ಸಮಾಜಸೇವಾ ರತ್ನ ಪ್ರಶಸ್ತಿ, ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಮೂಡುಬಿದಿರೆ ಉದ್ಯಮಿ ರಾಜೇಶ್ ಎಂ. ಕೋಟ್ಯಾನ್ ಅವರಿಗೆ ‘ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ ವಿಘ್ನೇಶ್ ಶೆಟ್ಟಿ ಅವರ ಸಲುವಾಗಿ ಅವರ ಮಾತೃಶ್ರೀಯವರನ್ನು ಮತ್ತು ರಾಷ್ಟ್ರಮಟ್ಟದ ೬೦೦ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಸುಮಂತ್ ಎಸ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ ವಹಿಸಿದ್ದರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಪಂಚಶಕ್ತಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ರಂಜಿತ್ ಪೂಜಾರಿ ತೋಡಾರು, ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಕರಾವಳಿ ಕೇಸರಿ ಸಂಘಟನೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಚಿದಾನಂದ ಕುಕ್ಯಾನ್, ಉಪಸ್ಥಿತರಿದ್ದರು.
ಕರಾವಳಿ ಕೇಸರಿ ಸೇವಾ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ ಸ್ವಾಗತಿಸಿ, ಗಣೇಶ್ ಬಿ ಅಳಿಯೂರು ಕಾರ್ಯಕ್ರಮ ನಿರ್ವಹಿಸಿದರು.














Leave a Reply