ಮೂಡುಬಿದಿರೆ:ಮಾಂಟ್ರಾಡಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಎಕ್ರೆಗಟ್ಟಲೆ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದು ಈ ಬಗ್ಗೆ ದೂರು ಕೊಟ್ಟರೂ ಕಂದಾಯ ಇಲಾಖೆ ಕ್ರಮ ವಹಿಸಿಲ್ಲ ಎನ್ನಲಾಗಿದೆ.
ಮಾಂಟ್ರಾಡಿ ಗ್ರಾಮದ ಸ.ನಂ 88-1ರಲ್ಲಿ ಎಲಿಯಾಸ್ ಸಲ್ದಾನ ಎಂಬವರು ತನ್ನ ಸ್ವಾಧೀನದಲ್ಲಿದ್ದ ಸರಕಾರಿ ಜಾಗವನ್ನು ಸಕ್ರಮಗೊಳಿಸುವಂತೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದು ಅವರ ಅರ್ಜಿ ವಿಚಾರಣೆ ಹಂತದಲ್ಲಿದೆ ಎನ್ನಲಾಗಿದೆ. ಈ ಮಧ್ಯೆ ಆಂತೋನಿ ಡಿಸೋಜಾ ಎಂಬವರು ನನ್ನ ಸ್ವಾಧೀನದಲ್ಲಿರುವ ಸರಕಾರಿ ಜಾಗದಲ್ಲಿ ಅಕ್ರಮವಾಗಿ ೧೫ ಕ್ಕೂ ಹೆಚ್ಚು ಪಿಲ್ಲರ್‌ಗಳನ್ನು ಹಾಕಿ ಜಾಗವನ್ನು ತನ್ನ ವಶಕ್ಕೆ ಪಡಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಹತ್ತಿರದಲ್ಲಿರುವ ಬೇರೆ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಎಲಿಯಾಸ್ ಸಲ್ದಾನ ತಹಶಿಲ್ದಾರ್‌ಗೆ ನೀಡಿದ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅವರು ಸ್ಥಳಿಯ ಗ್ರಾಮ ಲೆಕ್ಕಿಗರಿಗೆ ಹಾಗೂ ಮೂಡುಬಿದಿರೆ ತಹಶಿಲ್ದಾರ್‌ಗೆ ಎರಡೆರಡು ಬಾರಿ ದೂರು ನೀಡಿದ್ದರೂ ಜಾಗದ ಅತಿಕ್ರಮಣವನ್ನು ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ನನ್ನ ಜಾಗವನ್ನು ಬೇರೊಬ್ಬ ವ್ಯಕ್ತಿ ಅತಿಕ್ರಮಣ ಮಾಡಿರುವುದರಿಂದ ನನಗೆ ಅನ್ಯಾಯವಾಗಿದೆ. ವಯಸ್ಸಾಗಿರುವ ನನಗೆ ತಹಶಿಲ್ದಾರ್ ನ್ಯಾಯ ಒದಗಿಸಿಕೊಡಬೇಕೆಂದು ಅವರು ದೂರಿನಲ್ಲಿ ವಿನಂತಿಸಿದ್ದಾರೆ.
ಮಾಂಟ್ರಾಡಿ ಗ್ರಾಮ ಲೆಕ್ಕಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿ ಸದ್ರಿ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು ಜಾಗದ ಸರ್ವೆಗೆ ಸರ್ವೆ ಇಲಾಖೆಗೆ ಪತ್ರ ಬರೆದಿದ್ದಾರೆನ್ನಲಾಗಿದೆ. ಆದರೆ ಹಲವು ತಿಂಗಳುಗಳು ಕಳೆದರೂ ಇನ್ನೂ ಸರ್ವೆ ನಡೆದಿಲ್ಲ ಎನ್ನಲಾಗಿದೆ.

Leave a Reply