ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಕುರಿತು ಅರಿವು ಕಾರ್ಯಕ್ರಮ

ಮೂಡುಬಿದಿರೆ: ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಸಖಿ ಒನ್‌ಸ್ಟಾಪ್ ಸೆಂಟರ್ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್, ಇನ್ನರ್‌ವೀಲ್ ಕ್ಲಬ್ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಕುರಿತು ಅರಿವು ಕಾರ್ಯಕ್ರಮವನ್ನು ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಬಿಂಧ್ಯಾ ಶರತ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾದ ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಪ್ರಿಯಾ ರಾಜ್ ಮೋಹನ್  ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಕುರಿತು ಮಾತನಾಡಿ, ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ತಾಯಿಯರಾದ ನಾವೇ ಅವರನ್ನು ನೀನು ಹೆಣ್ಣು ಹಾಗಿರಬಾರದು, ಹೀಗಿರಬಾರದೆಂದು ಆಕೆಗೆ ಕಡಿವಾಣವನ್ನು ಹಾಕಲು ಮನೆಯಿಂದಲೇ ಆರಂಭಿಸುತ್ತೇವೆ. ಹೆಣ್ಣು ಮಕ್ಕಳಾದರೆ ಬೆಳಗ್ಗೆ ಬೇಗ ಏಳಬೇಕು, ಮನೆ ಕೆಲಸ ಮಾಡಬೇಕೆಂದು ಹೇಳಿ ಕೊಡುವ ನಾವುಗಳು, ಅದೇ ಗಂಡು ಮಗ ತಡವಾಗಿ ಎದ್ದರೂ ಮಗನನ್ನು ಮಾತ್ರ ಎದ್ದ ಕೂಡಲೇ ತಯಾರಾಗು ಎಂದು ನಾವೇ ಹೇಳುತ್ತೇವೆ. ಈ ತಾರತಮ್ಯ ನಮ್ಮ ಮನೆಯಿಂದಲೇ ದೂರ ಮಾಡಬೇಕು. ಇವತ್ತು ನಾವು ಸಮಾಜ ದೌರ್ಜನ್ಯ, ಸಬಲೀಕರಣ ಇದರೆಲ್ಲಾ ಬಗ್ಗೆ ಮಾತಾಡುವ ನಾವು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಅಡಿಪಾಯವನ್ನು ನಾವೇ ಹಾಕಿಕೊಂಡಿದ್ದೇವೆ. ಆದ್ದರಿಂದ ಮೊದಲು ನಮ್ಮ ಮನೆಯಿಂದಲೇ ಬದಲಾವಣೆಯಾಗಬೇಕು. ನಮ್ಮಲ್ಲಿರುವ ತಪ್ಪು ಕಲ್ಪನೆ ನಮ್ಮ  ಮನೆಯಿಂದಲೇ ದೂರವಾಗಬೇಕು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಟೆಂಪಲ್‌ಟೌನ್‌ನ ಅಧ್ಯಕ್ಷ ಪೂರ್ಣಚಂದ್ರ ಜೈನ್ ಮಾತನಾಡಿ, ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ  ಬಹಳ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು, ಇದರ ಮಾಹಿತಿಯನ್ನು ಪ್ರತಿಯೊಬ್ಬರು ಪಡೆದುಕೊಂಡು ನಿಮ್ಮ ಸುತ್ತಮುತ್ತಲಿರುವ ಎಷ್ಟೋ ಮಹಿಳೆಯರಿಗೆ ಈ ಬಗ್ಗೆ ತಿಳಿ ಹೇಳಿದರೆ ಈ ಕಾರ್ಯಕ್ರಮದಿಂದ ಇನ್ನಷ್ಟು ಮಹಿಳೆಯರು ವಿಚಾರಗಳನ್ನು ಅವರ ಅರಿವಿಗೆ ತರುವ ಕಾರ್ಯವನ್ನು ಮಾಡಿದಂತಾಗುತ್ತದೆ. ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾ ವೈದ್ಯಾಧಿಕಾರಿ ಅಕ್ಷತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಹಲವಾರು ಸೇವೆಗಳು ಲಭ್ಯವಾಗುವಂತಹ ಕೇಂದ್ರವೇ ಸಖಿ ಒನ್ ಸ್ಟಾಪ್ ಸೆಂಟರ್ ಎಂದರು.
ಮಹಿಳಾ ಸಬಲೀಕರಣ ಇಲಾಖೆಯ ವಿಶಾಲಾಕ್ಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶುಭ, ಪದಾಧಿಕಾರಿ ಸ್ವರ್ಣಲತಾ, ಸಮುದಾಯ ಆರೋಗ್ಯ ಕೇಂದ್ರದ ಎಲ್ಲಾ ಸುರಕ್ಷತಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿದ್ದರು.
ಆರೋಗ್ಯ ಕಾರ್ಯಕರ್ತೆ ವಿಜಯಾ ಪ್ರಾರ್ಥನೆಗೈದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾ ವೈದ್ಯಾಧಿಕಾರಿ ಅಕ್ಷತಾ ನಾಯಕ್ ಸ್ವಾಗತಿಸಿ, ಹಿರಿಯ ಪ್ರಾಥಮಿಕ ಸುರಕ್ಷತಾಧಿಕಾರಿ ಶಾಂತಮ್ಮ ನಿರೂಪಿಸಿದರು.

ADVRTISEMENT

Leave a Reply

Your email address will not be published. Required fields are marked *