ಮೂಡುಬಿದಿರೆ: ಮಂಗಳೂರು- ಮೂಡುಬಿದಿರೆ- ಕಾರ್ಕಳ ನಡುವೆ ಸರ್ಕಾರಿ ಬಸ್ ಬೇಕೆಂಬುವುದು ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರ ಬೇಡಿಕೆಯಾಗಿತ್ತು. ಜನರ ಈ ಬಹುದಿನಗಳ ಬೇಡಿಕೆಯು ಇನ್ನೇನೂ ಪೂರ್ಣಗೊಂಡಿದೆ ಎಂದಾಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಡುವೆ ಪೋಸ್ಟರ್ ಗುದ್ದಾಟ ಸದ್ದು ಮಾಡುತ್ತಿದೆ.
ಇತ್ತ ಕಡೆ ಬಿಜೆಪಿ ಪಕ್ಷವು ಸರ್ಕಾರಿ ಬಸ್ ಮೂಡುಬಿದಿರೆ, ಕಾರ್ಕಳ ಹಾಗೂ ಮಂಗಳೂರು ಮಧ್ಯೆ ಸಂಚಾರಿಸಲು ಶಾಸಕರೇ ಅವಿರತವಾಗಿ ಪ್ರಯತ್ನ ನಡೆಸಿ ಸರ್ಕಾರಿ ಬಸ್ ಬಂದಿದೆ ಎಂದು ಪೋಸ್ಟರ್‌ನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದರೆ, ಇತ್ತ ಕಡೆ ತಾಲೂಕಿನ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಪರವಾಗಿ ,ಜನಪ್ರತಿನಿಧಿಗಳ ಕೈಯಿಂದ ಆಗದ್ದು ಮೂಡುಬಿದಿರೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಿಂದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಗೆ ಧ್ವನಿಯಾಗಿ ಮಾತನಾಡಿ ನಮ್ಮೂರಿಗೆ ಸರ್ಕಾರಿ ಬಸ್ ಬರುವಂತೆ ಮಾಡಿರುತ್ತಾರೆಂಬ ಅಭಿನಂದನಾ ಪೋಸ್ಟರ್‌ಗಳು ವೈರಲ್ ಆಗುತ್ತಿವೆ.
ಸರ್ಕಾರಿ ಬಸ್ಸು ಯಾರೇ ಬರುವಂತೆ ಮಾಡಿದರೂ ಅದು ಒಳ್ಳೆಯದೇ. ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗುದಂತೂ ಸತ್ಯ. ಆದರೆ ಈ ಉತ್ತಮ ಕಾರ್ಯವನ್ನು ಪಕ್ಷಗಳು ರಾಜಕೀಯ ಜಿದ್ದಿಗೆ ಸಿಲುಕಿ ಬಸ್ ಬಾರದಂತೆ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಾರದು. ಇದರಿಂದ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾಗದಿದ್ದರೆ ಸಾಕೆಂಬುದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ (ಸರ್ಕಾರಿ ಬಸ್) ಓಡಾಟದಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಸಂತೋಷಪಟ್ಟಿದ್ದಾರೆ. ಕೆಲಸ ಯಾರೇ ಮಾಡಿದರೂ ಅದು ಉತ್ತಮ ಉದ್ದೇಶಕ್ಕಾಗಿಯೆ ಆಗಿದೆ. ಈ ವಿಚಾರವನ್ನು ರಾಜಕೀಯ ಗುದ್ದಾಟಕ್ಕೆ ಎಡೆ ಮಾಡಿ ಕೊಡದೇ ಸರ್ಕಾರಿ ಬಸ್ ನಿರಂತರವಾಗಿ ಓಡಾಡುವಂತಾಗಲು ಎರಡು ಪಕ್ಷಗಳು ಕೈ ಜೋಡಿಸುವ ಕೆಲಸ ಮಾಡಬೇಕಿದೆ.
