ಮೂಡುಬಿದಿರೆ: ತಾಲೂಕಿನ ದ.ಕ.ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೈನ್ ಮೂಡುಬಿದಿರೆ ಇಲ್ಲಿ ವಿವೇಕ ಶಾಲಾ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಎರಡು ವಿವೇಕ ಕೊಠಡಿಗಳನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಮಂಗಳವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಕೀಳರಿಮೆ ಬೇಡ. ಕನ್ನಡ ಮಾಧ್ಯಮದಲ್ಲಿ ಕಲಿತ ಹೆಚ್ಚಿನವರು ಉತ್ತಮ ಹುದ್ದೆಗಳನ್ನು ಅಲಂಕರಿಸಿ ಯಶಸ್ಸನ್ನು ಕಂಡವರಿದ್ದಾರೆ ಎಂದು ಹೇಳಿದರು.
ವಿವೇಕ ಶಾಲಾ ಯೋಜನೆಯಡಿ ತಾಲೂಕಿನ ಕೆಲವು ಶಾಲೆಗಳಿಗೆ ಈಗಾಗಲೇ ಹೆಚ್ಚುವರಿ ಕೊಠಡಿಗಳನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಕೊಠಡಿಗಳ ಅಗತ್ಯವಿದ್ದು ಅದಕ್ಕಾಗಿ ಈಗಾಗಲೇ ಸಚಿವರಿಗೆ ಮನವಿ ಮಾಡಲಾಗಿದ್ದು ಅನುದಾನ ಮಂಜೂರಾದರೆ ಈ ಶಾಲೆಗೂ ಹೆಚ್ಚುವರಿ ಕೊಠಡಿಯನ್ನು ನೀಡುವುದಾಗಿ ತಿಳಿಸಿದರು.
ಎಮ್.ಸಿ.ಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೇಶದಲ್ಲಿ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಶಾಸಕ ಕೋಟ್ಯಾನ್ ಅವರು ಸರಕಾರಿ ಶಾಲೆ ಬಗ್ಗೆ ಒಲವನ್ನು ಹೊಂದಿದ್ದು ಮೂಡುಬಿದಿರೆಗೆ ಸರಕಾರಿ ಪಿಯು ಮತ್ತು ಪದವಿ ಕಾಲೇಜನ್ನು ತಂದಿದ್ದಾರೆ ಎಂದ ಅವರು ಈ ಶಾಲೆಗೆ ಇನ್ನೂ ಮೂರು ಕೊಠಡಿಗಳ ಅಗತ್ಯವಿದ್ದು ಅದಕ್ಕೆ ಬೇಕಾಗಿರುವ ಅನುದಾನವನ್ನು ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸ್ಥಳದಾನಿ, ಚೌಟರ ಅರಮನೆಯ ಕುಲದೀಪ್ ಎಂ ಪುರಸಭಾ ಸದಸ್ಯೆ ಶಕುಂತಲಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್, ಮಂಗಳೂರು ಪಂಚಾಯತ್ ರಾಜ್ ಉಪವಿಭಾಗದ ರಾಯ್ ರೊಡ್ರಿಗ್ರಸ್, ಲಕ್ಷಣ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಘುವೀರ್ ಶೆಣೈ ಉಪಸ್ಥಿತರಿದ್ದರು.

Leave a Reply