ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಲ್ ನಿಧನರಾಗಿದ್ದಾರೆ. ಅವರು ಎಟ್ಟಿಕುಳಂನಲ್ಲಿರುವ ತಮ್ಮ ಮನೆಯಲ್ಲಿ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ನಿಧನರಾದರು.
ಉಳ್ಳಾಲ ತಂಙಳ್ ಎಂದೇ ಪ್ರಸಿದ್ಧರಾದ ತಾಜುಲ್ ಉಲಮಾ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅವರ ಪುತ್ರರಾದ ಅಸೈಯದ್ ಫಝಲ್ ಕೋಯಮ್ಮ ತಂಙಲ್ ಪ್ರಸ್ತುತ ಉಳ್ಳಾಲ ಖಾಝಿಯಾಗಿದ್ದರು.
ಇಂದು ಅಪರಾಹ್ನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ಅವರು ಭಾಗವಹಿಸಬೇಕಾದ ಕಾರ್ಯಕ್ರಮವು ನಿಗದಿಯಾಗಿತ್ತು. ಅವರು ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ರಾತ್ರಿ ಅವರು ಮಜ್ಲಿಸ್ ಒಂದರಲ್ಲಿ ಭಾಗವಹಿಸಿ ಪ್ರಾರ್ಥನೆ ನಡೆಸಿದ್ದರು. ಆದರೆ ಇಂದು ಬೆಳಿಗ್ಗೆ, ಹೃದಯಸ್ಥಂಭನದಿಂದ ಕೂರ ತಂಙಳ್ ಮನೆಯಲ್ಲಿ ನಿಧನ ಹೊಂದಿದರು.
ಎಟ್ಟಿಕುಳಂನಲ್ಲಿ ಇಂದು ಅಪರಾಹ್ನ 2 ಗಂಟೆಯವರೆಗೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಥಿವ ಶರೀರವು ಸಂಜೆ 7 ಗಂಟೆ ಸುಮಾರಿಗೆ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ವಠಾರಕ್ಕೆ ತಲುಪಲಿದೆ. ನಂತರ, ಕಡಬ ತಾಲೂಕಿನ ಕೂರತ್ ಗೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ದಫನ ಕಾರ್ಯ ನೆರವೇರಲಿದೆ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ತಿಳಿಸಿದ್ದಾರೆ.
ಕಾಸರಗೋಡು ದೇಳಿಯ ಜಾಮಿಯ ಸಅದಿಯ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೂರತ ತಂಙಳ್, 2014ರಲ್ಲಿ ತಾಜುಲ್ ಉಲಮಾ ನಿಧನರಾದ ಬಳಿಕ ಉಳ್ಳಾಲ ಖಾಝಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.