ಮೂಡುಬಿದಿರೆ: 1966 ರಲ್ಲಿ ಮೂಡುಬಿದಿರೆಯಲ್ಲಿ ಪ್ರಾರಂಭಗೊಂಡ ಎರಡನೇ ಪ್ರೌಢಶಾಲೆ ಬಾಬು ರಾಜೇಂದ್ರ ಪ್ರೌಢಶಾಲೆ. ಮಹಾವೀರ ಕಾಲೇಜಿನ ಆಡಳಿತ ಮಂಡಳಿಯಿಂದ ಪ್ರಾರಂಭಗೊಂಡ ಶಾಲೆಯಲ್ಲಿ ದೊಡ್ಡ ಕ್ರೀಡಾಂಗಣ, ಫುಟ್ಬಾಲ್ ಕೋರ್ಟ್, ಕೋಚಿಂಗ್ ಅವಕಾಶ, ಉಚಿತ ಶಾಲಾ ಸಮವಸ್ತ್ರ, ದೂರದ ವಿದ್ಯಾರ್ಥಿಗಳಿಗೆ ಉಚಿತ ರಿಕ್ಷಾ ಸೌಲಭ್ಯ ಅದೇ ರೀತಿ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಅವರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮಾಜಿ ಶಾಸಕರು, ಧರ್ಮಸ್ಥಳ ಯೋಜನೆ, ಹಳೆ ವಿದ್ಯಾರ್ಥಿಗಳು ಒಟ್ಟಾಗಿ ಒಬ್ಬೊಬ್ಬರಂತೆ ಮೂವರು ಗೌರವ ಶಿಕ್ಷಕರನ್ನು ನಿಯುಕ್ತಿಗೊಳಿಸಿರುತ್ತಾರೆ.
ಈಗಾಗಲೇ ಮೂಡುಬಿದಿರೆ ಸಮೀಪದ ತಾಕೊಡೆ ಹಾಗೂ ನೀರುಡೆಯ ಅನುದಾನಿತ ಶಾಲೆಗಳು ಮುಚ್ಚಿದೆ. ಬೆಳುವಾಯಿ, ಕಲ್ಲಮುಂಡ್ಕೂರು, ಶಿರ್ತಾಡಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸುತ್ತಿವೆ.
ವಿದ್ಯಾಸಂಸ್ಥೆಗಳ ವ್ಯಾಪಾರಿಕರಣ ಸಂಸ್ಕೃತಿಯಿಂದಾಗಿ ಕನ್ನಡ ಮಾಧ್ಯಮ ಹೊಡೆತವನ್ನು ಅನುಭವಿಸುತ್ತಿದೆ. ಜನರು ತಮ್ಮ ಸಮೀಪದ ಶಾಲೆಗಳನ್ನು ಬಿಟ್ಟು ಆಂಗ್ಲ ಮಾಧ್ಯಮದ ಸೆಳೆತದಲ್ಲಿ ದೂರ ದೂರದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ರಾಜ್ಯದ ರಾಜಕಾರಣಿಗಳು, ಅಧಿಕಾರಿಗಳು ಕೇವಲ ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಪ್ರಸ್ತುತ ಮೂಡುಬಿದಿರೆಯ ಹಿಂದುಳಿದ ವರ್ಗದ ಹಾಸ್ಟೆಲ್ ಹಾಗೂ ಎಸ್ಸಿ ಎಸ್ಟಿ ಹಾಸ್ಟೆಲ್ ನ ಮಕ್ಕಳಿಂದ ಬಿ ಆರ್ ಪಿ ಶಾಲೆ ಉಳಿದಿರುತ್ತದೆ. ಸ್ಥಳೀಯ ನಾಗರಿಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುವ ಮೂಲಕ ಇನ್ನಷ್ಟು ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ದುಬೈ ನಿವಾಸಿ ನಜೀರ್ ಹುಸೇನ್ ಉಪಸ್ಥಿತರಿದ್ದರು.

Leave a Reply