ಮೂಡುಬಿದಿರೆ: ದಾರಿ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿದ ದ್ವಿಚಕ್ರ ವಾಹನ ಸವಾರರು!
ಮೂಡುಬಿದಿರೆ, ಸೋಮವಾರ: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸವಾರರು ವೃದ್ಧೆಯೊಬ್ಬರ ಬಳಿ ದಾರಿ ಕೇಳುವ ನೆಪದಲ್ಲಿ ಮಾತನಾಡಿ, ಆಕೆಯ ಕುತ್ತಿಗೆಯಲ್ಲಿದ್ದ 3 ಪವನ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ದ.ಕ ಜಿಲ್ಲೆಯ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಾಡಿನಲ್ಲಿ ಸಂಭವಿಸಿದೆ.
ಮಾರ್ನಾಡು ವರ್ಧಮಾನ ಬಸದಿ ಬಳಿಯ 82 ವರ್ಷದ ವೃದ್ಧೆ ಪ್ರೇಮಾ ಅವರು ತಮ್ಮ ಮನೆಯ ಸಮೀಪದ ಅಂಗಡಿಯಿಂದ ಹಾಲು ತರುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸವಾರರು ವೃದ್ಧೆಯ ಬಳಿ ಗಾಡಿ ನಿಲ್ಲಿಸಿ, “ಇಲ್ಲಿ ಮಠ ಎಲ್ಲಿ?” ಎಂದು ವಿಚಾರಿಸಿದರು. ವೃದ್ಧೆ “ಮಠ ಇಲ್ಲ ಇಲ್ಲ, ಅದು ಬನ್ನಡ್ಕದಲ್ಲಿದೆ,” ಎಂದು ಉತ್ತರಿಸುತ್ತಿದ್ದಂತೆ, ಆರೋಪಿಗಳು ಆಕೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾದರು.
ಆಗಮಿಸಿದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಮತ್ತು ರೈನ್ ಕೋಟ್ ಧರಿಸಿದ್ದಾಗಿ ತಿಳಿದುಬಂದಿದೆ. ಆರೋಪಿಗಳು ಮಾರ್ನಾಡು ಕಡೆಯಿಂದ ಬಂದು, ನಂತರ ತಂಡ್ರಕೆರೆ ಕಡೆಗೆ ಸಾಗಿದ್ದಾರೆ.
ಈ ಘಟನೆ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪರಿಸರದ ಸಿಸಿಟಿವಿ ದಾಖಲಾತಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
Leave a Reply