“14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು”

14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಹಳೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 14 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಯೋರ್ವನನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸರ ತಂಡವು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಂಧಿತ ಆರೋಪಿ ಮಂಗಳೂರು ತಾಲೂಕು ಕೊಳವೂರಿನ ಅಯ್ಯನ ಮನೆ ನಿವಾಸಿ ರಮೇಶ (38) ಎಂದು ಗುರುತಿಸಲಾಗಿದೆ.

2010ರಲ್ಲಿ ಮೂಡುಬಿದಿರೆಯ ಗಾಂಧಿನಗರದ ನ್ಯೂ ಕಿರಣ್ ಫ್ಯಾಕ್ಟರಿಗೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ, ಬ್ಯಾಂಕ್ ನವರು ಫ್ಯಾಕ್ಟರಿಯ ಸ್ಥಿರಾಸ್ತಿ ಹಾಗೂ ಸೊತ್ತುಗಳನ್ನು 2010 ಸೆಪ್ಟೆಂಬರ್ 6 ರಂದು ಜಫ್ತಿ ಮಾಡಿ ಸೀಲು ಹಾಕಿ ಕಾವಲುಗಾರರನ್ನು ನೇಮಿಸಿದ್ದರು. ಆದರೆ 2010 ಸೆಪ್ಟೆಂಬರ್ 18 ರಂದು ರಾತ್ರಿ, ಫ್ಯಾಕ್ಟರಿಯ ಮೆನೇಜಿಂಗ್ ಡೈರೆಕ್ಟರ್ ಎಂ.ಎಂ. ಮಹದೇವಪ್ಪ, ಹರೀಶ ಶೆಟ್ಟಿ, ಹರೀಶ, ನಾಗೇಶ, ರಾಮಚಂದ್ರ ಹಾಗೂ ರಮೇಶ್ ಮುಂತಾದವರು ಮಾರಕಾಯುಧಗಳೊಂದಿಗೆ ನುಗ್ಗಿ, ಬೀಗ ಒಡೆದು ಕಾವಲುಗಾರನಿಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದರು.

ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ರಮೇಶ್ ನ್ಯಾಯಾಲಯಕ್ಕೆ ಹಾಜರಾಗದೆ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯದ ಆದೇಶದಂತೆ, ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದಲ್ಲಿ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆರೋಪಿ ರಮೇಶ್‌ನ ಪತ್ತೆ ಕಾರ್ಯದಲ್ಲಿ ಪಿ.ಎಸ್.ಐ. ಸಿದ್ದಪ್ಪ ನರನೂರ, ಪಿ.ಎಸ್.ಐ. ಕೃಷ್ಣಪ್ಪ, ಮತ್ತು ಸಿಬ್ಬಂದಿಗಳಾದ ರಾಜೇಶ, ಸುರೇಶ, ದಿಲೀಪ್, ವೆಂಕಟೇಶ ಅವರು ಸಹಕಾರ ನೀಡಿದರು.

ADVRTISEMENT

Leave a Reply

Your email address will not be published. Required fields are marked *