ಮೂಡುಬಿದಿರೆ : ೨೦೨೩-೨೪ ಹಾಗೂ ೨೪-೨೫ ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ಅನುದಾನ, ನಗರೋತ್ಥಾನ ಹಂತ-೪ ಎಸ್.ಎಫ್ .ಸಿ ಮುಕ್ತ ನಿಧಿ ಅನುದಾನ ಹಾಗೂ ಪುರಸಭಾ ನಿಧಿಯ ಅನುದಾನದಡಿ ಸಹಿತ ಒಟ್ಟು ರೂ ೫.೧೨ ಕೋ.ವೆಚ್ಚದಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಶನಿವಾರ ಪುರಸಭೆಯಲ್ಲಿ ಶಿಲಾನ್ಯಾಸಗೈದರು.
ಶಿಲಾನ್ಯಾಸಗೈದು ಮಾತನಾಡಿದ ಕೋಟ್ಯಾನ್ ಅವರು ಪುರಸಭೆಯ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಒಂದು ಕೋ.ವೆಚ್ಚದಲ್ಲಿ ಮೂಡುಬಿದಿರೆಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಜ್ಯೋತಿನಗರದ ಬಳಿ ಎಂ.ಆರ್.ಘಟಕವನ್ನು ಸ್ಥಾಪಿಸಲು ಗುದ್ದಲಿ ಪೂಜೆಯನ್ನು ನೆರವೇರಿಸಲಾಗಿದೆ. ಅಲ್ಲದೆ ಪುರಸಭೆಯ ಅನುದಾನದಲ್ಲಿ ಪುರಸಭೆಗೆ ಉತ್ತಮ ಗುಣಮಟ್ಟದ ಲಿಫ್ಟ್ ವ್ಯವಸ್ಥೆ ವಿವಿಧ ಕಾಮಗಾರಿಗಳು ನಡೆಯಲಿದ್ದು ಇವುಗಳು ಸಮರ್ಪಕವಾಗಿ ನಡೆಯುವಂತೆ ಅಧಿಕಾರಿಗಳು ಮತ್ತು ಪುರಸಭೆಯ ಸದಸ್ಯರುಗಳು ಗಮನಹರಿಸಬೇಕೆಂದ ಅವರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೇ ಮೂಡುಬಿದಿರೆಯನ್ನು ಅಭಿವೃದ್ಧಿಗೊಳಿಸಲು ಎಲ್ಲರೂ ಕೈಜೋಡಿಸೋಣ ಎಂದರು.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅಭಿವೃದ್ಧಿ ಕಾರ್ಯಗಳು ನಡೆಯಲು ಎಲರೂ ಸಹಕಾರ ನೀಡಬೇಕೆಂದು ಹೇಳಿದರು.
ಉಪಾಧ್ಯಕ್ಷ ನಾಗರಾಜ್ ಪೂಜಾರಿ, ವಾಡ್ ೯ ಸದಸ್ಯ ರಾಜೇಶ್ ನಾಯ್ಕ ಹಿರಿಯ ಸದಸ್ಯ ಪಿ.ಕೆ.ಥೋಮಸ್, ನಗರೋತ್ಥಾನದ ಯೋಜನಾ ನಿರ್ದೇಶಕ ಪುರಂದರ ಕೋಟ್ಯಾನ್, ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜ್, ಪುರಸಭಾ ಎಂಜಿನಿಯರ್ ನಳಿನ್ ಕುಮಾರ್ ಉಪಸ್ಥಿತರಿದ್ದರು.
ಮುಖ್ಯಾಧಿಕಾರಿ ಇಂದು ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪುರಸಭಾ ಕಂದಾಯ ಅಧಿಕಾರಿ ಜ್ಯೋತಿ ಹೆಚ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅಲಂಗಾರು ದೇವಸ್ಥಾನದ ಸುಬ್ರಹ್ಮಣ್ಯ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

Leave a Reply